ನವದೆಹಲಿ: ಯೆಮನ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷ ಪ್ರಿಯ ಕೇಸ್ ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ನಿಮಿಷ ಪ್ರಿಯ ಗಲ್ಲು ಶಿಕ್ಷೆ ಕುರಿತಾಗಿ ಇಂದು ಯೆಮನ್ ಮಹತ್ವದ ಘೋಷಣೆ ಮಾಡಿದೆ.
ನಾಳೆ ನಿಮಿಷ ಪ್ರಿಯ ಗಲ್ಲು ಶಿಕ್ಷೆ ಜಾರಿಯಾಗಬೇಕಿತ್ತು. ಈ ಬಗ್ಗೆ ಇಂದು ಸೂಫಿ ಹಬೀಬ್ ಉಮರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ನಿಮಿಷ ಪ್ರಿಯ ಗಲ್ಲು ಶಿಕ್ಷೆ ಮುಂದೂಡಲು ತೀರ್ಮಾನ ಮಾಡಲಾಗಿದೆ. ಹೀಗಾಗಿ ನಾಳೆ ನಿಮಿಷ ಪ್ರಿಯಗೆ ಗಲ್ಲು ಶಿಕ್ಷೆ ಜಾರಿಯಾಗಲ್ಲ.
ಸದ್ಯದ ಮಟ್ಟಿಗೆ ಶಿಕ್ಷೆ ಜಾರಿಗೊಳಿಸುವುದನ್ನು ಮುಂದೂಡಲಾಗಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಗಲ್ಲು ಶಿಕ್ಷೆ ರದ್ದುಗೊಳಿಸಿಲ್ಲ. ಆದರೂ ಮುಂದೂಡಿರುವುದರಿಂದ ನಿಮಿಷ ಪ್ರಿಯಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮತ್ತಷ್ಟು ಅವಕಾಶ ಸಿಗಲಿದೆ.
ನಮ್ಮ ಕೈಯಿಂದ ಏನೆಲ್ಲಾ ಸಾಧ್ಯವೋ ಅದೆಲ್ಲಾ ಪ್ರಯತ್ನ ಮಾಡಿಯಾಗಿದೆ ಎಂದು ಸುಪ್ರೀಂಕೋರ್ಟ್ ಮುಂದೆ ನಿನ್ನೆಯಷ್ಟೇ ಕೇಂದ್ರ ಸರ್ಕಾರ ಕೈ ಚೆಲ್ಲಿ ಕೂತಿತ್ತು. ಇದರ ಬೆನ್ನಲ್ಲೇ ನಾಳೆ ನಿಮಿಷ ಪ್ರಿಯಗೆ ಗಲ್ಲು ಶಿಕ್ಷೆಯಾಗಿಯೇ ತೀರುತ್ತದೆ ಎಂಬ ಬೇಸರ ಭಾರತೀಯರಲ್ಲಿತ್ತು. ಆದರೆ ಈಗ ಪೋಸ್ಟ್ ಪೋನ್ ಮಾಡಿರುವುದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.
ಪ್ರಕರಣವೇನು?
ಪಾಲಕ್ಕಾಡ್ ಮೂಲದ ನರ್ಸ್ ನಿಮಿಷ ಪ್ರಿಯ ಕೆಲಸದ ನಿಮಿತ್ತ ಯೆಮನ್ ಗೆ ಹೋಗಿದ್ದರು. ಬಳಿಕ ಅಲ್ಲಿನ ಪ್ರಜೆ ತಲಾಲ್ ಮಹ್ದಿ ಎಂಬಾತನ ಜೊತೆ ಕೈ ಜೋಡಿಸಿ ಕ್ಲಿನಿಕ್ ಒಂದನ್ನು ಸ್ಥಾಪಿಸಿದ್ದಳು. ಅಲ್ಲಿನ ನಿಯಮ ಪ್ರಕಾರ ಅಲ್ಲಿ ಸಂಸ್ಥೆ ಆರಂಭಿಸಬೇಕಾದರೆ ಅಲ್ಲಿನ ಸ್ಥಳೀಯರ ಸಹಾಯ ಬೇಕು. ಆದರೆ ಬಳಿಕ ಮಹ್ದಿ ನಿಮಿಷಳಿಗೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ. ಆಕೆಯ ಪಾಸ್ ಪೋರ್ಟ್ ಕೊಡದೇ ಸತಾಯಿಸಿದ್ದ. ಹೀಗಾಗಿ ಆತನಿಂದ ಪಾಸ್ ಪೋರ್ಟ್ ಪಡೆಯಲು ಮಹ್ದಿಗೆ ಅಮಲು ಬರುವ ಇಂಜೆಕ್ಷನ್ ನೀಡಿದ್ದಳು. ಆದರೆ ಅದು ಓವರ್ ಡೋಸ್ ಆಗಿ ಮಹ್ದಿ ಸಾವನ್ನಪ್ಪಿದ್ದ. ಹೀಗಾಗಿ ಆತನ ಕೊಲೆ ಕೃತ್ಯದಲ್ಲಿ ನಿಮಿಷ ಪ್ರಿಯಳನ್ನು ಅರೆಸ್ಟ್ ಮಾಡಲಾಗಿತ್ತು. 2017 ರಿಂದಲೂ ನಿಮಿಷ ಪ್ರಿಯ ಜೈಲಿನಲ್ಲೇ ಇದ್ದಳು.