ನವದೆಹಲಿ: ಭಾರತದ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಎಂಥಾ ಸ್ನೇಹ ಸಂಬಂಧವಿದೆ ಎಂಬುದಕ್ಕೆ ಈಗ ಈ ಒಂದು ಟ್ವೀಟ್ ಸಾಕ್ಷಿಯಾಗಿದೆ.
ಉಕ್ರೇನ್ ಜೊತೆಗಿನ ಯುದ್ಧ ಕೊನೆಗಾಣಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಸಭೆ ನಡೆಸಿದ್ದರು. ಈ ಸಭೆಯ ಫಲಿತಾಂಶ ಭಾರತಕ್ಕೂ ಪರಿಣಾಮ ಬೀರಲಿದೆ. ಯಾಕೆಂದರೆ ಮಾತುಕತೆ ಫಲಪ್ರದವಾಗದೇ ಇದ್ದರೆ ಭಾರತದ ಮೇಲೆ ಹೆಚ್ಚುವರಿ ಸುಂಕದ ಬರೆ ಹಾಕುವುದಾಗಿ ಟ್ರಂಪ್ ಘೋಷಿಸಿದ್ದರು. ರಷ್ಯಾ ಜೊತೆಗೆ ವ್ಯಾಪಾರ ಮುಂದುವರಿಸಿರುವ ಭಾರತ ಆ ದೇಶಕ್ಕೆ ಉಕ್ರೇನ್ ಜೊತೆಗಿನ ಯುದ್ಧಕ್ಕೆ ಹಣ ಒದಗಿಸುತ್ತಿದೆ ಎನ್ನುವುದು ಟ್ರಂಪ್ ಆರೋಪ.
ಆದರೆ ಭಾರತ ಮಾತ್ರ ರಷ್ಯಾ ಜೊತೆಗಿನ ಸ್ನೇಹ ಕಳೆದುಕೊಳ್ಳಲು ತಯಾರಿಲ್ಲ. ಇದೇ ಕಾರಣಕ್ಕೆ ರಷ್ಯಾ ಭಾರತದ ಬೆನ್ನಿಗೇ ನಿಂತಿದೆ. ಇದೀಗ ಟ್ರಂಪ್-ಪುಟಿನ್ ಮಾತುಕತೆ ಬಳಿಕ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು ಈ ಟ್ವೀಟ್ ನಿಂದಲೇ ಪುಟಿನ್-ಮೋದಿ ನಡುವಿನ ಸ್ನೇಹ ಸಂಬಂಧ ಎಷ್ಟು ಗಾಢವಾಗಿದೆ ಎಂದು ತಿಳಿದುಬರುತ್ತದೆ.
ಟ್ರಂಪ್ ಜೊತೆಗೆ ಮಾತುಕತೆಗೆ ಮುನ್ನ ರಷ್ಯಾ ಅಧ್ಯಕ್ಷ ಪುಟಿನ್ ನನಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಇದೀಗ ಮಾತುಕತೆ ಬಳಿಕ ಪುಟಿನ್ ಕರೆ ಮಾಡಿ ಏನೆಲ್ಲಾ ಮಾತುಕತೆಯಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿದೆ. ಭಾರತ ಯಾವತ್ತೂ ಶಾಂತಿಯನ್ನು ಬಯಸುತ್ತದೆ ಎಂದಿದ್ದಾರೆ. ಈ ಟ್ವೀಟ್ ಮೂಲಕ ಭಾರತದ ಮೇಲೆ ರಷ್ಯಾ ಎಷ್ಟು ವಿಶ್ವಾಸವಿಟ್ಟುಕೊಂಡಿದೆ ಎಂದು ಸಾಬೀತಾಗುತ್ತದೆ.