ಬೀಜಿಂಗ್ : ತನ್ನ ಮೂತ್ರದಲ್ಲಿ ರಕ್ತ ಮತ್ತು ನಿಯಮಿತವಾಗಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 33 ವರ್ಷದ ಚೀನಾ ವ್ಯಕ್ತಿಯೊಬ್ಬ ವೈದ್ಯರನ್ನು ಸಂಪರ್ಕಿಸಿದ ಬಳಿಕ ಈತ ಅಂಡಾಶಯ ಹಾಗೂ ಗರ್ಭಾಶಯವನ್ನು ಹೊಂದಿರುವ ವಿಚಾರ ತಿಳಿದು ಆಘಾತಕ್ಕೊಳಗಾಗಿದ್ದಾನೆ.
ಚೆನ್ ಲಿ ಎಂದು ಗುರುತಿಸಿಕೊಂಡಿರುವ ವ್ಯಕ್ತಿ, ಪ್ರೌಢಾವಸ್ಥೆಯಲ್ಲಿ ತನ್ನ ಅನಿಯಮಿತ ಮೂತ್ರ ವಿಸರ್ಜನೆಯನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅಂದರೆ ಸುಮಾರು 20 ವರ್ಷಗಳಿಂದ ಈತ ಮೂತ್ರದಲ್ಲಿ ರಕ್ತ ಮತ್ತು ಹೊಟ್ಟೆ ನೋವನ್ನು ಅನುಭವಿಸುತ್ತಿದ್ದ.
ಸುಮಾರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರಿಂದ ವೈದ್ಯರು ವ್ಯಕ್ತಿಗೆ ಅಪೆಂಡಿಸೈಟಿಸ್ ಎಂದು ರೋಗನಿರ್ಣಯ ಮಾಡಿದರು. ಈ ರೋಗಕ್ಕಾಗಿ ಚಿಕಿತ್ಸೆ ನೀಡಿದ ನಂತರವೂ ರೋಗಲಕ್ಷಣಗಳು ಮುಂದುವರಿಯಿತು.
ಕಳೆದ ವರ್ಷ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸಿದ ವೇಳೆ ವ್ಯಕ್ತಿ ಸ್ತ್ರೀ ಲೈಂಗಿಕ ವರ್ಣತಂತುಗಳನ್ನು ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಮತ್ತೊಂದು ವೈದ್ಯಕೀಯ ತಪಾಸಣೆಯಲ್ಲಿ ಈತ ಗರ್ಭಾಶಯ ಹಾಗೂ ಅಂಡಾಶಯ ಸೇರಿದಂತೆ ಸ್ತ್ರೀ ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿದ್ದಾನೆ ಎಂಬ ಸತ್ಯ ಬೆಳಕಿಗೆ ಬಂದಿದೆ.