ಐಪಿಎಲ್ 2023 ಹರಾಜು: ದಾಖಲೆ ಮೊತ್ತಕ್ಕೆ ಬಿಕರಿಯಾದ ಸ್ಯಾಮ್ ಕ್ಯುರೇನ್
ಶುಕ್ರವಾರ, 23 ಡಿಸೆಂಬರ್ 2022 (16:19 IST)
Photo Courtesy: Twitter
ಕೊಚ್ಚಿ: ಐಪಿಎಲ್ 2023 ರ ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ನಡೆಯುತ್ತಿದ್ದು, ವಿದೇಶೀ ಆಟಗಾರರಿಗೆ ಭಾರೀ ಬೇಡಿಕೆ ಬಂದಿದೆ.
ಇದೀಗ ಪ್ರಕ್ರಿಯೆ ಜಾರಿಯಲ್ಲಿದ್ದು, ಇತ್ತೀಚೆಗಿನ ವರದಿ ಬಂದಾಗ ಸ್ಯಾಮ್ ಕ್ಯುರೇನ್ ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಬರೋಬ್ಬರಿ 18.50 ಕೋಟಿ ರೂ.ಗೆ ಕ್ಯುರೇನ್ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿ ಮಾಡಿದೆ.
ಇನ್ನು, ಆಸ್ಟ್ರೇಲಿಯಾದ ಮತ್ತೊಬ್ಬ ತಾರೆ ಕ್ಯಾಮರೂನ್ ಗ್ರೀನ್ ರನ್ನು ಮುಂಬೈ ಇಂಡಿಯನ್ಸ್ 17.50 ಕೋಟಿ ರೂ.ಗೆ ಖರೀದಿಸಿದೆ. ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ 16.25 ಕೋಟಿ ರೂ.ಗೆ, ಹ್ಯಾರೀ ಬ್ರೂಕ್ 13.25 ಕೋಟಿ ರೂ.ಗೆ ಹೈದರಾಬಾದ್ ತಂಡದ ಪಾಲಾಗಿದ್ದಾರೆ.
ಇನ್ನು, ಹೈದರಾಬಾದ್ ನಾಯಕರಾಗಿದ್ದ ಕೇನ್ ವಿಲಿಯಮ್ಸನ್ ಮೂಲ ಬೆಲೆಯಾದ 2 ಕೋಟಿ ರೂ.ಗೆ ಗುಜರಾತ್ ಟೈಟನ್ಸ್ ತಂಡದ ಪಾಲಾಗಿದ್ದಾರೆ. ಜೇಸನ್ ಹೋಲ್ಡರ್ ರನ್ನು 5.75 ಕೋಟಿ ರೂ.ಗೆ ಗುಜರಾತ್ ಖರೀದಿಸಿದರೆ, ಒಡಿಯನ್ ಸ್ಮಿತ್ ರನ್ನು 50 ಲಕ್ಷಕ್ಕೆ ಲಕ್ನೋ ಖರೀದಿ ಮಾಡಿದೆ. ನಿಕಲಸ್ ಪೂರನ್ ಅವರನ್ನು ಲಕ್ನೋ 16 ಕೋಟಿ ರೂ.ಗೆ ತನ್ನದಾಗಿಸಿಕೊಂಡಿದೆ. ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಖರೀದಿಯಾಗದೇ ಉಳಿದಿದ್ದಾರೆ.
ಉಳಿದಂತೆ ಹರಾಜು ಪ್ರಕ್ರಿಯೆ ಜಾರಿಯಲ್ಲಿದ್ದು, ಮತ್ತಷ್ಟು ಆಟಗಾರರು ದಾಖಲೆಯ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆಯಲ್ಲಿದ್ದಾರೆ.