ನವದೆಹಲಿ: ದೇಶದಾದ್ಯಂತ ಇದೀಗ Gpay, Phone pay ಸೇರಿದಂತೆ UPI ಪೇಮೆಂಟ್ ಇದ್ದಕ್ಕಿದ್ದಂತೆ ಕಷ್ಟವಾಗುತ್ತಿದ್ದು, ಸರ್ವರ್ ಡೌನ್ ಆಗಿದೆ ಎಂದು ವರದಿಯಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ಯುಪಿಐ ಪಾವತಿಯನ್ನೇ ಆಶ್ರಯಿಸಿರುತ್ತಾರೆ. ಆದರೆ ಕಳೆದ ಕೆಲವು ಗಂಟೆಗಳಿಂದ ಅನೇಕ ಬಾರಿ ಪ್ರಯತ್ನಪಟ್ಟರೂ ಯುಪಿಐ ಆಪ್ ಗಳಿಂದ ಹಣ ಪಾವತಿಯಾಗುತ್ತಿಲ್ಲ. ಸರ್ವರ್ ಡೌನ್ ಅಥವಾ ಪೇಮೆಂಟ್ ಡಿಕ್ಲೈನ್ ಮೆಸೇಜ್ ಬರುತ್ತಿದೆ.
ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲ, ಬ್ಯಾಂಕ್ ಗಳಿಗೂ ಹಣಕಾಸಿನ ವಹಿವಾಟಿಗೆ ಇದರಿಂದ ಸಮಸ್ಯೆಯಾಗಿದೆ. ಇಂದು ಸುಮಾರು 7 ಗಂಟೆಯಿಂದ ಈ ಸಮಸ್ಯೆ ಎದುರಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ಪ್ರಮುಖ ಬ್ಯಾಂಕ್ ಗಳಿಗೂ ಫಂಡ್ ವರ್ಗಾವಣೆ, ಆನ್ ಲೈನ್ ಟ್ರಾನ್ಸೇಕ್ಷನ್, ಮೊಬೈಲ್ ಬ್ಯಾಂಕಿಂಗ್ ವ್ಯವಹಾರಗಳಿಗೆ ಇದರಿಂದ ಅಡಚಣೆಯಾಗಿದೆ.
ಈ ಬಗ್ಗೆ ಯುಪಿಐ ಪಾವತಿಗಳನ್ನು ನಿರ್ವಹಿಸುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಇಂಡಿಯಾ (ಎನ್ ಪಿಸಿಐ) ಇನ್ನಷ್ಟೇ ಅಧಿಕೃತವಾಗಿ ಕಾರಣವೇನೆಂದು ಪ್ರಕಟಣೆ ನೀಡಬೇಕಾಗಿದೆ. ಆದರೆ ಯುಪಿಐ ಪಾವತಿಯಿಲ್ಲದೇ ಎಲ್ಲರೂ ಪರದಾಡುವ ಸ್ಥಿತಿ ಎದುರಾಗಿದೆ.