ಬೆಂಗಳೂರು: ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಲನಚಿತ್ರ ನಟ ಅಲ್ಲು ಅರ್ಜುನ್ ಅವರನ್ನು ಶುಕ್ರವಾರ ಬಂಧಿಸಲಾಗಿದ್ದು, ಇದೀಗ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ನಾಂಪಲ್ಲಿ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ನಟನ ಬಂಧನದ ನಂತರ, ಅಲ್ಲು ಅರ್ಜುನ್ ಅವರ ಕಾನೂನು ತಂಡವು ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಇಂದು ಮಧ್ಯಾಹ್ನ ಅಲ್ಲು ಅರ್ಜುನ್ ಅವರನ್ನು ಮನೆಯಲ್ಲಿ ಪೊಲೀಸರು ವಶಕ್ಕೆ ಪಡೆದರು. ನಂತರ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಗಾಂಧಿ ಆಸ್ಪತ್ರೆಗೆ ಕರೆದೊಯ್ದು, ತಪಾಸಣೆ ನಡೆಸಲಾಯಿತು. ಬಿಗಿ ಭದ್ರತೆಯ ನಡುವೆ ನಟನನ್ನು ಅವರ ನಿವಾಸದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್, ಅವರ ಸಹೋದರ ಅಲ್ಲು ಸಿರೀಶ್ ಮತ್ತು ಮಾವ ಕಂಚಾರ್ಲ ಚಂದ್ರಶೇಖರ್ ರೆಡ್ಡಿ ಕೂಡ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.
ಏನಿದು ಪ್ರಕರಣ: ಪುಪ್ಪ 2 ಮೊದಲ ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್‌ಗೆ ಬಂದಿದ್ದ ನಟ ಪ್ರಭಾಸ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ಕಾಲ್ತುಳಿತದಿಂದ 35 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಎಂಟು ವರ್ಷದ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೃತ ಮಹಿಳೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಕಲಂ 105 ಮತ್ತು 118 (1) ಅಡಿಯಲ್ಲಿ ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.