ಹೈದರಾಬಾದ್: ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮಹಿಳೆಯ ಸಾವಿಗೆ ಕಾರಣರಾಗಿದ್ದಾರೆ ಎಂಬ ಕಾರಣಕ್ಕೆ ನಿನ್ನೆ ಬಂಧಿತರಾಗಿದ್ದ ನಟ ಅಲ್ಲು ಅರ್ಜುನ್ ಇಂದು ಮುಂಜಾನೆಯೇ ಬಿಡುಗಡೆಯಾಗಿದ್ದಾರೆ. ಅವರು ರಿಲೀಸ್ ಆಗಿ ಮನೆಗೆ ಬಂದಾಗ ಅವರನ್ನು ಬರಮಾಡಿಕೊಂಡ ವಿಡಿಯೋ ಈಗ ವೈರಲ್ ಆಗಿದೆ.
ಪುಷ್ಪ 2 ರಿಲೀಸ್ ಆದಾಗ ಸಂಧ್ಯಾ ಥಿಯೇಟರ್ ಗೆ ಬಂದಿದ್ದ ಅಲ್ಲು ಅರ್ಜುನ್ ನನ್ನು ನೋಡಲು ಜನ ನೂಕುನುಗ್ಗಲು ನಡೆಸಿದ್ದರು. ಈ ವೇಳೆ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ್ದಳು. ಡಿಸೆಂಬರ್ 4 ರಂದು ಪ್ರಕರಣ ನಡೆದಿತ್ತು. ಈ ಘಟನೆ ಬಗ್ಗೆ ಮಹಿಳೆಯ ಪತಿ ದೂರು ನೀಡಿದ್ದರು. ಅದರಂತೆ ಅಲ್ಲು ಅರ್ಜುನ್ ವಿರುದ್ಧ ಕೇಸ್ ದಾಖಲಾಗಿತ್ತು.
ನಿನ್ನೆ ಅಲ್ಲು ಅರ್ಜುನ್ ರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮಧ್ಯಂತರ ಜಾಮೀನು ಸಿಕ್ಕ ಹಿನ್ನಲೆಯಲ್ಲಿ ನಿನ್ನೆ ಒಂದು ರಾತ್ರಿ ಜೈಲಿನಲ್ಲಿ ಕಳೆದಿದ್ದ ಅಲ್ಲು ಇಂದು ಮುಂಜಾನೆಯೇ ರಿಲೀಸ್ ಆಗಿ ಮನೆಗೆ ಬಂದಿದ್ದಾರೆ. ಅವರನ್ನು ಪೊಲೀಸರು ಅರೆಸ್ಟ್ ಮಾಡಿದಾಗ ಪತ್ನಿ ಸ್ನೇಹ ರೆಡ್ಡಿ ಕಣ್ಣೀರು ಹಾಕಿದ್ದರು.
ಇಂದು ಅಲ್ಲು ಮನೆಗೆ ಬರುವಾಗ ಅವರನ್ನು ಬರಮಾಡಿಕೊಳ್ಳಲು ಪತ್ನಿ ಸ್ನೇಹ ರೆಡ್ಡಿ, ಇಬ್ಬರು ಮಕ್ಕಳು, ಸಹೋದರ ಅಲ್ಲು ಸಿರೀಶ್ ಸೇರಿದಂತೆ ಕುಟುಂಬಸ್ಥರು ಗೇಟಿನ ಬಳಿಯೇ ಕಾದು ನಿಂತಿದ್ದರು. ಅಲ್ಲು ಕಾರಿನಿಂದ ಇಳಿಯುತ್ತಿದ್ದಂತೇ ಮೊದಲು ಸಹೋದರ ಬಂದು ಅಪ್ಪಿ ಸ್ವಾಗತಿಸಿದರೆ ಬಳಿಕ ಮಗ, ಪತ್ನಿ, ಮಗಳು ಹೀಗೆ ಪ್ರತಿಯೊಬ್ಬರೂ ಬಂದು ಅಪ್ಪಿ ಹಿಡಿದು ಸಂಭ್ರಮಿಸಿದ್ದಾರೆ. ಬಳಿಕ ಅಲ್ಲು ಮಾಧ್ಯಮಗಳ ಮುಂದೆ ಕೈಮುಗಿದು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿ ತೆರಳಿದ್ದಾರೆ.