ಕೊರೋನಾದಿಂದಾಗಿ ಕನ್ನಡ ಧಾರವಾಹಿಗಳು 10 ದಿನ ಪ್ರಸಾರ ಬಂದ್? ನಿಜಾಂಶ ಇಲ್ಲಿದೆ

Krishnaveni K

ಗುರುವಾರ, 19 ಮಾರ್ಚ್ 2020 (10:08 IST)
ಬೆಂಗಳೂರು: ಕೊರೋನಾವೈರಸ್ ಭೀತಿಯಿಂದಾಗಿ ಧಾರವಾಹಿಗಳೂ ಚಿತ್ರೀಕರಣ ಬಂದ್ ಮಾಡುತ್ತವೆ. ಇದರಿಂದಾಗಿ ಕೆಲವು ದಿನ ನಿಮಗೆ ನಿಮ್ಮ ನೆಚ್ಚಿನ ಧಾರವಾಹಿಗಳು ನೋಡಲು ಸಾಧ್ಯವಾಗದು ಎಂಬಿತ್ಯಾದಿ ಸುದ್ದಿಗಳು ಓಡಾಡುತ್ತಿವೆ.


ಆದರೆ ನಿಜಾಂಶ ಏನು ಗೊತ್ತಾ? ಕನ್ನಡದ ಯಾವುದೇ ಧಾರವಾಹಿ ಚಿತ್ರೀಕರಣ ಸ್ಥಗಿತಗೊಳಿಸಲು ಸದ್ಯಕ್ಕೆ ಯಾವುದೇ ಸೂಚನೆ ಬಂದಿಲ್ಲ. ಆದರೆ ಯಾವಾಗ ಬೇಕಾದರೂ ಇಂತಹದ್ದೊಂದು ಆದೇಶ ಬಂದರೂ ಬರಬಹುದು. ಹೀಗೊಂದು ಆತಂಕದಲ್ಲೇ ಎಲ್ಲಾ ಧಾರವಾಹಿ ತಂಡಗಳೂ ಇವೆ. ಇದಕ್ಕಾಗಿ ಎಪಿಸೋಡ್ ಗಳನ್ನು ಬ್ಯಾಂಕಿಂಗ್ ಮಾಡುವ ಕೆಲಸ ನಡೆಯುತ್ತಿದೆ ಎಂದು ಗಟ್ಟಿಮೇಳ, ಕನ್ನಡತಿ, ಸತ್ಯಂ ಶಿವಂ ಸುಂದರಂ ಧಾರವಾಹಿಗಳಲ್ಲಿ ನಟಿಸುತ್ತಿರುವ ನಟ ರವಿಕುಮಾರ್ ಹೇಳಿದ್ದಾರೆ.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯಂ ಶಿವಂ ಸುಂದರಂ ಧಾರವಾಹಿಯಲ್ಲಿ ಈಗಾಗಲೇ ವೈದ್ಯರನ್ನು ಕರೆಸಿ ಚಿತ್ರೀಕರಣಕ್ಕೆ ಬರುವಾಗ ಮತ್ತು ವಾಪಸ್ ಹೋಗುವಾಗ ತಂಡದವರನ್ನು ತಪಾಸಣೆ ಮಾಡುವ ಕೆಲಸ ನಡೆಯುತ್ತಿದೆ. ಇನ್ನು ಕೆಲವು ಧಾರವಾಹಿಗಳಲ್ಲಿ ಎರಡು ಯೂನಿಟ್ ಗಳಲ್ಲಿ ಹಗಲು-ರಾತ್ರಿಯೆನ್ನದೆ ಶೂಟಿಂಗ್ ಮಾಡಿ ಸುಮಾರು 10 ದಿನಗಳಿಗಾಗುವಷ್ಟು ಎಪಿಸೋಡ್ ಗಳನ್ನು ಬ್ಯಾಂಕಿಂಗ್ ಮಾಡುವ ಕೆಲಸ ನಡೆಯುತ್ತಿದೆ.

ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಜೊತೆ ಜೊತೆಯಲಿ’ ಧಾರವಾಹಿಯಲ್ಲಿ ಮೊದಲ ಐದು ನಿಮಿಷ ಟೈಟಲ್ ಹಾಡು ಪ್ರಸಾರ ಮಾಡಿ ಎಪಿಸೋಡ್ ಅವಧಿಯನ್ನು ಪ್ರತಿನಿತ್ಯ ಐದು ನಿಮಿಷ ಕಡಿತಗೊಳಿಸುತ್ತಿದೆ. ಈ ಮೂಲಕ ಒಂದು ವೇಳೆ 10 ದಿನ ಶೂಟಿಂಗ್ ಸ್ಥಗಿತಗೊಳಿಸಿದರೂ ಎಪಿಸೋಡ್ ಪ್ರಸಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಹಾಗಾಗಿ ನಿಮ್ಮ ಮೆಚ್ಚಿನ ಧಾರವಾಹಿಗಳು ಪ್ರಸಾರವಾಗದೇ ಇರುವ ಭಯ ಸದ್ಯಕ್ಕಂತೂ ಬೇಡ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ