ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಮಧ್ಯಂತರ ಜಾಮೀನು ಪಡೆದಿರುವ ನಟ ದರ್ಶನ್ ಭವಿಷ್ಯ ಇಂದು ಹೈಕೋರ್ಟ್ ನಲ್ಲಿ ನಡೆಯಲಿದೆ. ಅವರ ಜಾಮೀನಿನ ಬಗ್ಗೆ ಇಂದು ಹೈಕೋರ್ಟ್ ತೀರ್ಪು ನೀಡುವ ಸಾಧ್ಯತೆಯಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್ ಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂಬ ಕಾರಣಕ್ಕೆ ನಟ ದರ್ಶನ್ ಗೆ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಈ ಜಾಮೀನು ಅಂತ್ಯಗೊಳ್ಳಲು ಇನ್ನು ಎರಡು ದಿನ ಮಾತ್ರ ಬಾಕಿಯಿದೆ. ಈ ಕಾರಣಕ್ಕೆ ದರ್ಶನ್ ಪರ ವಕೀಲರು ಶುಕ್ರವಾರ ಮಧ್ಯಂತರ ಜಾಮೀನು ವಿಸ್ತರಿಸುವಂತೆ ಮನವಿ ಮಾಡಿದ್ದರು.
ಹೀಗಾಗಿ ಇಂದು ಹೈಕೋರ್ಟ್ ಮಧ್ಯಂತರ ಜಾಮೀನು ಮುಂದುವರಿಸಬೇಕಾ ಅಥವಾ ಎರಡೇ ದಿನದಲ್ಲಿ ಮತ್ತೆ ಜೈಲಿಗೆ ಶರಣಾಗಬೇಕಾ ಎಂಬ ಬಗ್ಗೆ ತೀರ್ಮಾನವಾಗಲಿದೆ. ಇನ್ನೊಂದೆಡೆ ದರ್ಶನ್ ಮಾಮೂಲು ಬೇಲ್ ಗೂ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯ ವಿಚಾರಣೆಯೂ ನಡೆಯುತ್ತಿದೆ.
ಈಗಾಗಲೇ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ. ಇದೀಗ ಎಸ್ ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸುತ್ತಿದ್ದಾರೆ. ಹೀಗಾಗಿ ಈ ಜಾಮೀನು ಅರ್ಜಿಯ ತೀರ್ಪು ಇಂದು ಬಾರದು. ಒಂದು ವೇಳೆ ಮಧ್ಯಂತರ ಜಾಮೀನು ಅವಧಿ ವಿಸ್ತರಿಸಲು ಕೋರ್ಟ್ ನಿರಾಕರಿಸಿದರೆ ಎರಡು ದಿನಗಳ ಬಳಿಕ ದರ್ಶನ್ ಮತ್ತೆ ಬಳ್ಳಾರಿಗೆ ಶಿಫ್ಟ್ ಆಗಬೇಕಾಗುತ್ತದೆ. ಹೀಗಾಗಿ ದರ್ಶನ್ ಗೆ ಇಂದು ಮಹತ್ವದ ದಿನವಾಗಿದೆ.