ಹರಿಪ್ರಿಯಾ-ವಸಿಷ್ಠ ಪ್ರಪೋಸ್ ಮಾಡಿದ್ದೇಗೆ? ಮಾಧ್ಯಮದ ಮುಂದೆ ಲವ್ ವಿಚಾರ ಬಿಚ್ಚಿಟ್ಟ ಜೋಡಿ

ಗುರುವಾರ, 12 ಜನವರಿ 2023 (09:00 IST)
Photo Courtesy: Twitter
ಬೆಂಗಳೂರು: ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಇದೇ ತಿಂಗಳು 26 ರಂದು ಮೈಸೂರಿನಲ್ಲಿ ಹಸೆಮಣೆ ಏರಲು ಸಜ್ಜಾಗಿದೆ.

ಇದಕ್ಕೂ ಮುನ್ನ ಈ ನವ ಜೋಡಿ ಮಾಧ್ಯಮಗಳ ಮುಂದೆ ಬಂದು ತಮ್ಮ ಪ್ರೀತಿ ಮತ್ತು ಮದುವೆ ಬಗ್ಗೆ ವಿವರ ಹಂಚಿಕೊಂಡಿದ್ದಾರೆ. ಎಲ್ಲರೂ ನಾನು ನಾಯಿ ಮರಿ ಕೊಟ್ಟು ಹರಿಪ್ರಿಯಾರನ್ನು ಪಟಾಯಿಸಿದ್ದೆ ಅಂದುಕೊಂಡಿದ್ದಾರೆ. ಆದರೆ ಅದಕ್ಕೂ ಮೊದಲೇ ನಮ್ಮ ನಡುವೆ ಸ್ನೇಹವಿತ್ತು ಎಂದಿದ್ದಾರೆ.

‘ಕಾಲೇಜು ದಿನಗಳಿಂದಲೂ ನನಗೆ ಹರಿಪ್ರಿಯಾ ಎಂದರೆ ಕ್ರಶ್. ಅವರ ಸಿನಿಮಾ ಹಾಡು ನೋಡಿ ಖುಷಿಪಡುತ್ತಿದ್ದೆ. ಬಳಿಕ ನಮ್ಮ ನಡುವೆ ಸ್ನೇಹವಾಯಿತು. ನಾನು ಕಷ್ಟದ ದಿನಗಳಲ್ಲಿದ್ದಾಗ ಹರಿಪ್ರಿಯಾ ನನಗೆ ಧೈರ್ಯ ಹೇಳಿದ್ದರು, ಬೆಂಬಲವಾಗಿ ನಿಂತರು. ಆಗ ನಮ್ಮ ಸಂಬಂಧ ಗಟ್ಟಿಯಾಗಿತ್ತು. ನಾನು ತಾಯಿ ಇಲ್ಲದೇ ಬೆಳೆದವನು, ಅವರು ತಂದೆಯಿಲ್ಲದೇ ಬೆಳೆದವರು. ಹೀಗಾಗಿ ನಾವು ಪರಸ್ಪರ ತಾಯಿ, ತಂದೆಯರ ಗುಣವಿರುವ ಸಂಗಾತಿಯನ್ನು ಕಂಡುಕೊಂಡೆವು. ಕೊನೆಗೆ ಒಂದು ದಿನ ನಾನು ಧೈರ್ಯ ಮಾಡಿ ಹರಿಪ್ರಿಯಾಗೆ ಪ್ರಪೋಸ್ ಮಾಡಲು ಹೊರಟೆ. ಅವರ ಮನಸ್ಸಿನಲ್ಲೂ ಪ್ರೀತಿಯಿತ್ತು. ಹೀಗಾಗಿ ನಾನೇ ಮೊದಲು ಹೇಳಬೇಕು ಎಂದರು. ಕೊನೆಗೆ ಇಬ್ಬರೂ ಪ್ರೀತಿ ಹೇಳಿಕೊಂಡೆವು. ಮೊದಲು ಹರಿಪ್ರಿಯಾ ಮನೆಯಲ್ಲಿ ಹೇಳಿದ್ದೆವು. ಅವರು ಖುಷಿಯಿಂದ ಒಪ್ಪಿಕೊಂಡರು. ಬಳಿಕ ನಮ್ಮ ಮನೆಯಲ್ಲಿ ಹೇಳಿದೆವು. ಈಗ ಇದು ಅರೇಂಜ್ಡ್ ಮ್ಯಾರೇಜ್ ಆಗಿದೆ. ಮನೆಯವರ ಒತ್ತಾಯದ ಮೇರೆಗೆ ಬೇಗ ಮದುವೆಯಾಗುತ್ತಿದ್ದೇವೆ’ ಎಂದಿದ್ದಾರೆ.

ಮಾಧ‍್ಯಮಗೋಷ್ಠಿಯಲ್ಲಿ ಹರಿಪ್ರಿಯಾ-ವಸಿಷ್ಠ ಸಿಂಹ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಿದ್ದಾರೆ. ಅಲ್ಲದೆ, ಮದುವೆ ಖಾಸಗಿಯಾಗಿರುತ್ತದೆ. ಬಳಿಕ ಆರತಕ್ಷತೆಗೆ ಎಲ್ಲರಿಗೂ ಆಹ್ವಾನವಿರುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ