ಮುಂಬೈ: 35 ವರ್ಷದ ಎಡ್ವರ್ಡ್ ಜೇಕಬ್ಸ್ ಮತ್ತು 33 ವರ್ಷದ ಅನಸ್ತಾಸಿಯಾ ಎಟಿಯೆನ್ನೆ ಎಂಬಾಕೆಯನ್ನು ಹತ್ಯೆಗೈದ ಆರೋಪದಲ್ಲಿ ಬಾಲಿವುಡ್ ಖ್ಯಾತ ನಟಿ ನರ್ಗಿಸ್ ಫಕ್ರಿ ಅವರ ಸಹೋದರಿ ಅಲಿಯಾ ಫಕ್ರಿ ಅವರನ್ನು ಬಂಧಿಸಲಾಗಿದೆ.
ತನ್ನ ಮಾಜಿ ಪ್ರಿಯಕರ ಎಡ್ವರ್ಡ್ ಜೇಕಬ್ಸ್ ಮತ್ತು ಆತನ ಸ್ನೇಹಿತೆ ಅನಸ್ತಾಸಿಯಾ ನೆಲೆಸಿದ್ದ ಎರಡು ಅಂತಸ್ತಿನ ಗ್ಯಾರೇಜ್‌ಗೆ 43 ವರ್ಷದ ಅಲಿಯಾ ಫಕ್ರಿ ಬೆಂಕಿ ಹಚ್ಚಿದ್ದರು. ಜತೆಗೆ, ನೀವೆಲ್ಲರೂ ಇಂದು ಸಾಯುತ್ತೀರಿ ಎಂದು ಕೂಗಾಡಿದ್ದರು ಎಂದು ವರದಿಯಾಗಿದೆ.
ಬೆಂಕಿ ಸಂಪೂರ್ಣವಾಗಿ ಕಟ್ಟಡವನ್ನು ಆವರಿಸಿದ್ದರಿಂದ ಎಡ್ವರ್ಡ್ ಜೇಕಬ್ಸ್ ಮತ್ತು ಅನಸ್ತಾಸಿಯಾ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ದಟ್ಟ ಹೊಗೆಯಿಂದಾಗಿ ಉಸಿರುಗಟ್ಟಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.
ಜೇಕಬ್ಸ್ ಒಂದು ವರ್ಷದ ಹಿಂದೆ ಅಲಿಯಾ ಫಕ್ರಿಯೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದ. ಆದರೂ ಅಲಿಯಾ, ನನ್ನ ಮಗನನ್ನು ಹಿಂಬಾಲಿಸುತ್ತಿದ್ದಳು ಎಂದು ಜೇಕಬ್ಸ್ ಅವರ ತಾಯಿ ಆರೋಪಿಸಿದ್ದಾರೆ.
ಜೇಕಬ್ಸ್ ಕುಟುಂಬಸ್ಥರ ಆರೋಪದ ಬಗ್ಗೆ ನರ್ಗಿಸ್ ಫಕ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ಅವರ ತಾಯಿ ಪ್ರತಿಕ್ರಿಯಿಸಿದ್ದು, ನನ್ನ ಮಗಳು ಅಲಿಯಾ ಯಾರನ್ನಾದರೂ ಕೊಲೆ ಮಾಡುತ್ತಾಳೆ ಎಂಬುದನ್ನು ನಂಬಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.