ಕನ್ನಡ ನಿರೂಪಕಿ ಅಪರ್ಣಾಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದ ನಮ್ಮ ಮೆಟ್ರೋ

Krishnaveni K

ಶುಕ್ರವಾರ, 12 ಜುಲೈ 2024 (13:01 IST)
ಬೆಂಗಳೂರು: ಮುಂದಿನ ನಿಲ್ದಾಣ ಎಂದು ನಮ್ಮ ಮೆಟ್ರೋದಲ್ಲಿ ಅಚ್ಚ ಕನ್ನಡದಲ್ಲಿ ಕೇಳಿಬರುವ ಧ್ವನಿ ನಮ್ಮ ಹೆಮ್ಮೆಯ ಕನ್ನಡ ನಿರೂಪಕಿ ಅಪರ್ಣಾರದ್ದು. ಅವರು ನಿನ್ನೆ ರಾತ್ರಿ  ಇಹಲೋಕದ ಪ್ರಯಾಣ ಮುಗಿಸಿದ್ದಾರೆ.

ಇಹಲೋಕದ ಪ್ರಯಾಣ ಮುಗಿಸಿದ ಅಪರ್ಣಾಗೆ ನಮ್ಮ ಮೆಟ್ರೋ ವಿಶಿಷ್ಟವಾಗಿ ಗೌರವ ಸಲ್ಲಿಸಿದೆ. ನಿನ್ನೆ ರಾತ್ರಿ ಶ್ವಾಸಕೋಶದ ಕ್ಯಾನ್ಸರ್ ನಿಂದಾಗಿ ನಿಧನರಾದ ನಿರೂಪಕಿ ಅಪರ್ಣಾ ಎಷ್ಟೋ ಸರ್ಕಾರಿ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಮನೆ ಮಾತಾದವರು. ಅವರ ಧ್ವನಿ ಮೆಟ್ರೋದಲ್ಲಿ ಮಾತ್ರವಲ್ಲ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಲ್ಲೂ ಕೇಳಿಬರುತ್ತದೆ.

ಈ ಚಿರಪರಿಚಿತ ಧ್ವನಿ ಈಗ ಚಿರನಿದ್ರೆಗೆ ಜಾರಿದೆ. ಈ ಸಂದರ್ಭದಲ್ಲಿ ನಮ್ಮ ಮೆಟ್ರೋದಲ್ಲಿ ವಾಯ್ಸ್ ಅನೌನ್ಸ್ ಮಾಡುವ ಮೂಲಕ ಅಪರ್ಣಾ ಸಾವಿಗೆ ಸಂತಾಪ ವ್ಯಕ್ತಪಡಿಸಿದೆ. ಅಲ್ಲದೆ, ಬಿಎಂಆರ್ ಸಿಎಲ್ ಅಧಿಕಾರಿಗಳೂ ನಿರೂಪಕಿ ಅಪರ್ಣಾ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಳೆದ 13 ವರ್ಷಗಳಿಂದ ನಮ್ಮ ಮೆಟ್ರೋದಲ್ಲಿ ಅಪರ್ಣಾ ಧ್ವನಿ ಕೇಳಿಬರುತ್ತಿದೆ. 2011 ರಲ್ಲಿ ಮೊದಲ ಬಾರಿಗೆ ಸಂಚಾರ ಆರಂಭಿಸಿದಾಗಲೇ ಅಪರ್ಣಾ ಉದ್ಘೋಷಕಿಯಾಗಿ ಧ್ವನಿ ನೀಡಿದ್ದರು. ಈಗಲೂ ನಮ್ಮ ಮೆಟ್ರೋ ಹತ್ತಿದೊಡನೆ ಕೇಳಿಬರುವ ಧ್ವನಿ ಅಪರ್ಣಾರದ್ದೇ. ಆಕೆಗೆ ನಮ್ಮ ಮೆಟ್ರೋ ವಿಶೇಷವಾಗಿ ಗೌರವ ಸಲ್ಲಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ