ಬೆಂಗಳೂರು: ಸು ಫ್ರಮ್ ಸೋ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ನಟ, ನಿರ್ಮಾಪಕ ರಾಜ್ ಬಿ ಶೆಟ್ಟಿ ಸಿನಿಮಾದ ಬಂದರೋ ಬಂದರೋ ಭಾವ ಬಂದರೋ ಹಾಡಿಗೆ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಜನ ಭಾರೀ ಸಂಖ್ಯೆಯಲ್ಲಿ ಕಾಮೆಂಟ್ಸ್ ಮಾಡಿದ್ದಾರೆ.
ಸು ಫ್ರಮ್ ಸೋ ಸಿನಿಮಾ ಕಡಿಮೆ ಬಜೆಟ್ ನಲ್ಲಿ ಸ್ಟಾರ್ ಗಳಿಲ್ಲದೇ ನಿರ್ಮಾಣವಾದ ಸಿನಿಮಾ. ಹಾಗಿದ್ದರೂ ಗಳಿಕೆಯಲ್ಲಿ 20 ಕೋಟಿ ಸನಿಹ ಬಂದು ನಿಂತಿದೆ. ಇದಕ್ಕೆ ಕಾರಣ ಸಿನಿಮಾದ ಕತೆ ಮತ್ತು ಹಾಸ್ಯದ ಹೂರಣ. ಫ್ಯಾಮಿಲಿ ಸಮೇತ ಜನ ಥಿಯೇಟರ್ ಗೆ ಬಂದು ಚಿತ್ರ ನೋಡುತ್ತಿದ್ದಾರೆ.
ಇಂದಿನಿಂದ ಸಿನಿಮಾ ಮಲಯಾಳಂನಲ್ಲೂ ತೆರೆ ಕಾಣುತ್ತಿದೆ. ಈಗಾಗಲೇ ಜರ್ಮನಿ, ಅಮೆರಿಕಾ ಸೇರಿದಂತೆ ವಿದೇಶದಲ್ಲೂ ಚಿತ್ರ ಕಾಣುತ್ತಿದೆ. ಒಟ್ಟಿನಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಚಿತ್ರರಂಗಕ್ಕೆ ಈ ಸಿನಿಮಾ ಬೂಸ್ಟ್ ನೀಡಿದೆ. ರಾಜ್ ಬಿ ಶೆಟ್ಟಿ ನಿರ್ಮಾಪಕನಾಗಿ ಗೆದ್ದಿದ್ದಾರೆ.
ಈ ಸಿನಿಮಾದ ಹಾಡು ಈಗ ಟ್ರೆಂಡ್ ಆಗಿದೆ. ಬಂದರೋ ಬಂದರೋ ಭಾವ ಬಂದರೋ ಹಾಡು ಹಿಟ್ ಆಗಿತ್ತು. ಈ ಹಾಡಿಗೆ ಈಗ ರಾಜ್ ಬಿ ಶೆಟ್ಟಿ ಸಿನಿಮಾದ ಸಹ ಕಲಾವಿದರೊಂದಿಗೆ ಸ್ಟೆಪ್ಸ್ ಹಾಕಿ ರೀಲ್ಸ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಈ ಸ್ಟೆಪ್ಸ್ ಟ್ರೆಂಡ್ ಆಗುತ್ತೆ ಬಿಡಿ ಎಂದಿದ್ದಾರೆ. ಶೆಟ್ರೇ ನೀವು ಮಾತ್ರ ಬೇರೇನೇ ಬಿಡಿ ಎಂದು ಹೊಗಳಿದ್ದಾರೆ.