ಅಪ್ಪು ತೀರಿಕೊಂಡಾಗ ಬರದಿರುವುದಕ್ಕೆ ಕಾರಣ ತಿಳಿಸಿದ ರಜನೀಕಾಂತ್
ಪುನೀತ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ಬಳಿಕ ವೇದಿಕೆಯಲ್ಲಿ ಮಾತನಾಡಿದ ರಜನಿ, ಪುನೀತ್ ಬಗ್ಗೆ ಹಳೆಯ ನೆನಪುಗಳನ್ನು ಹಂಚಿಕೊಂಡರು.
ಪುನೀತ್ ತೀರಿಕೊಂಡಾಗ ನನಗೆ ಆಪರೇಷನ್ ಆಗಿ ಐಸಿಯುವಿನಲ್ಲಿದ್ದೆ. ಹೀಗಾಗಿ ಆಗ ವಿಷಯ ಹೇಳುವುದು ಬೇಡ ಎಂದು ನನಗೆ ಮೂರು ದಿನ ಕಳೆದ ಮೇಲೆ ಸುದ್ದಿ ತಿಳಿಸಿದರು. ಹಾಗಾಗಿ ಆಗ ಬರಲಾಗಲಿಲ್ಲ. ಚಿಕ್ಕ ಮಗುವಾಗಿದ್ದಾಗ ಅಣ್ಣಾವ್ರ ಜೊತೆ ನಾನು ಪುನೀತ್ ನನ್ನು ನೋಡಿದ್ದೆ. ಆಗ ಡಾ.ರಾಜ್ ಕುಮಾರ್ ಅವರು ಶಬರಿಮಲೆಗೆ ಕಾಲ್ನಡಿಗೆಯಲ್ಲಿ ತೆರಳಿದ್ದರು. ಅವರ ಜೊತೆ ಅಪ್ಪುವೂ ಇದ್ದ. ಆಗ ಅವನಿಗೆ ಕೇವಲ ನಾಲ್ಕು ವರ್ಷ. ಆಗಲೇ ಎಲ್ಲರ ಜೊತೆ ಅವನೂ ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುತ್ತಿದ್ದ. ಹೊಳೆಯುವ ಕಣ್ಣುಗಳ ಆ ಹುಡುಗ ದೊಡ್ಡವನಾಗಿ ಅಪ್ಪು ಸಿನಿಮಾ ಮಾಡಿದ್ದಾಗ ಅಣ್ಣಾವ್ರು ಹೇಳಿದ್ದಕ್ಕೆ ಅವರ ಜೊತೆ ಕುಳಿತು ಆ ಸಿನಿಮಾ ನೋಡಿದ್ದೆ. ಎಷ್ಟು ಅದ್ಭುತವಾಗಿ ಫೈಟ್, ಡ್ಯಾನ್ಸ್ ಮಾಡಿದ್ದ ಅಪ್ಪು. ಆಗಲೇ ಅಣ್ಣಾವ್ರು ನನಗೆ ಈ ಸಿನಿಮಾ 100 ದಿನ ಓಡಿದರೆ ಆ ಸಮಾರಂಭಕ್ಕೆ ನೀವು ಬರಬೇಕು ಎಂದಿದ್ದರು. ಅದರಂತೆ ಇಲ್ಲೇ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ನಾನು ಬಂದಿದ್ದೆ ಎಂದು ರಜನಿ ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು.