ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಇನ್ನೆರಡು ದಿನದೊಳಗೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆ ಎಂಬ ಸುದ್ದಿಯಿದೆ.
ಯಾವುದೇ ಪ್ರಕರಣದ ಆರೋಪಿಗಳ ಬಂಧನದ ಬಳಿಕ 90ದಿನಗಳೊಳಗೆ ನ್ಯಾಯಾಲಯಕ್ಕೆ ಕಡ್ಡಾಯವಾಗಿ ಚಾರ್ಜ್‌ಶೀಟ್ ಅನ್ನು ಸಲ್ಲಿಸಬೇಕಾಗುತ್ತದೆ. ಇದೀಗ ಈಗಾಗಲೇ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳ ಬಂಧನವಾಗಿ ಮೂರು ತಿಂಗಳಾಗುತ್ತಾ ಬಂದಿದೆ. ಅದಲ್ಲದೆ ಪ್ರಕರಣ ಸಂಬಂಧ ಎಲ್ಲ ಸಾಕ್ಷ್ಯಗಳನ್ನು ವಶ ಪಡೆದಿರುವ ಪೊಲೀಸರು 4ಸಾವಿರ ಪುಟಗಳ ಚಾರ್ಚ್‌ಶೀಟ್ ಸಲ್ಲಿಸಲಿದ್ದಾರೆಂಬ ಮಾಹಿತಿಯಿದೆ.
ಇನ್ನೂ ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿರುವ ಅಂಶಗಳ ಪ್ರಕಾರ ನಟ ದರ್ಶನ್ ಅವರೇ ಎ1 ಆರೋಪಿಯಾಗುತ್ತಾರಾ ಎಂಬ ಮಾತುಗಳು ಹರಿದಾಡುತ್ತಿದೆ. ಇನ್ನೂ ಈ ಸಂಬಂದ ಇಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರಲ್ಲಿ ಪ್ರಶ್ನಿಸಿದಾಗ , ಯಾರು ನಂಬರ್ 1, ನಂಬರ್ 2 ಯಾರು ಎಂದು ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸುವುದು ಪೊಲೀಸ್ ಅಧಿಕಾರಿಗಳು ನಾವಲ್ಲ ಎಂದರು.
ಬಿಜೆಪಿ ನಾಯಕರು ಸುಖಾಸುಮ್ಮನೆ ಮಾಡುತ್ತಿರುವ ಎಲ್ಲ ಆರೋಪಗಳಿಗೆ ಸರ್ಕಾರ ಸರಿಯಾದ ಪ್ರತ್ಯುತ್ತರ ನೀಡುತ್ತದೆ ಎಂದು ಪ್ರತಿಕ್ರಿಯಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ಪ್ರಕರಣದಲ್ಲಿ ನಮ್ಮ ತನಿಖೆ ಪೂರ್ಣಗೊಂಡಿದ್ದು, ಚಾರ್ಜ್ ಶೀಟ್ ಈಗಾಗಲೇ ತಯಾರಾಗಿದೆ. ಆರೋಪ ಪಟ್ಟಿಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ನೀಡಿ ಸಲಹೆಗಳನ್ನು ಪಡೆಯಲಾಗಿದ್ದು, ಅವರು ಕೆಲವು ಬದಲಾವಣೆಗಳನ್ನು ಸೂಚಿಸಿದ್ದಾರೆ. ಆ ಬದಲಾವಣೆಗಳ ಬಳಿಕ ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ ಎಂದು ಹೇಳಿದರು.