ಬೆಂಗಳೂರು: ಹೀರೋ ಎಂದರೆ ಆಕರ್ಷಕ ವ್ಯಕ್ತಿತ್ವ ಬೇಕು, ಸಿಕ್ಸ್ ಪ್ಯಾಕ್ ಬೇಕು, ಏಕಕಾಲಕ್ಕೆ ನಾಲ್ಕು ವಿಲನ್ ಗಳನ್ನು ಹೊಡೆದು ಹಾಕಬೇಕು.. ಎಂಬಿತ್ಯಾದಿ ಸಿದ್ಧ ಸೂತ್ರಗಳನ್ನು ಮೀರಿ ಇಂದು ಸ್ಯಾಂಡಲ್ ವುಡ್ ನಲ್ಲಿ ಕೆಲವು ನಟರು ಕೇವಲ ತಮ್ಮ ಪ್ರತಿಭೆಯಿಂದ ಕ್ಲಿಕ್ಕಾಗುತ್ತಿದ್ದಾರೆ. ಅಂತಹವರಲ್ಲಿ ನಾಗಭೂಷಣ್ ಒಬ್ಬರು.
ಇಕ್ಕಟ್, ಬಡವ ರಾಸ್ಕಲ್ ಮುಂತಾದ ಸಿನಿಮಾಗಳಿಂದ ಜನರಿಗೆ ಇಷ್ಟವಾಗಿರುವ ನಾಗಭೂಷಣ್ ಈಗ ಸೋಲೋ ಹೀರೋ ಆಗಿ ಫ್ಯಾಮಿಲಿ ಅಡಿಯನ್ಸ್ ಗೆ ಇಷ್ಟವಾಗುತ್ತಿದ್ದಾರೆ. ಹೇಳಿಕೊಳ್ಳುವಷ್ಟು ಉದ್ದ-ಮೈಕಟ್ಟು ಇಲ್ಲದೇ ಇದ್ದರೂ ಈ ಸ್ಪುರದ್ರೂಪಿ ನಟ ಸಹಜ ಅಭಿನಯದಿಂದಲೇ ಮನಗೆಲ್ಲುತ್ತಿದ್ದಾರೆ.
ಇತ್ತೀಚೆಗೆ ವೂಟ್ ಆಪ್ ನಲ್ಲಿ ಪ್ರಸಾರವಾದ ಹನಿಮೂನ್ ಎಕ್ಸ್ ಪ್ರೆಸ್ ಎಂಬ ವೆಬ್ ಸರಣಿಯಲ್ಲೂ ನಟಿಸಿ ರೊಮ್ಯಾಂಟಿಕ್ ಪಾತ್ರಗಳನ್ನೂ ನಿಭಾಯಿಸಬಲ್ಲೆ ಎಂದು ಭರವಸೆ ಮೂಡಿಸಿದ್ದಾರೆ. ಮಲಯಾಳಂ ಸಿನಿಮಾಗಳಲ್ಲಿ ವ್ಯಕ್ತಿಗಿಂತ ಅಭಿನಯ ಮುಖ್ಯ ಎಂಬ ಟ್ರೆಂಡ್ ಎಷ್ಟೋ ಸಮಯದಿಂದ ಚಾಲ್ತಿಯಲ್ಲಿದೆ. ಅಲ್ಲಿ ಹೀರೋಗಳು ಆಕರ್ಷಕವಾಗಿರಲೇಬೇಕೆಂಬ ನಿಯಮವಿಲ್ಲ. ನಾಗಭೂಷಣ್ ರಂತಹ ಕಲಾವಿದರು ಕನ್ನಡದಲ್ಲಿ ಕ್ಲಿಕ್ ಆಗುತ್ತಿರುವುದು ನೋಡಿದರೆ ಆ ಮಾತು ಇಲ್ಲೂ ನಿಜವಾಗುತ್ತಿದೆ ಎನ್ನಬಹುದು.