ನಿರ್ದೇಶಕನ ಮನೆಯಲ್ಲಿ ಕದ್ದ ವಸ್ತು ಮರಳಿಸಿ ಕ್ಷಮೆ ಕೇಳಿದ ಕಳ್ಳರು

Krishnaveni K

ಮಂಗಳವಾರ, 13 ಫೆಬ್ರವರಿ 2024 (16:08 IST)
ಚೆನ್ನೈ: ಕಡೈಸಿ ವ್ಯವಸಾಯಿ ಚಿತ್ರದ ಖ್ಯಾತಿಯ ನಿರ್ದೇಶಕ ಮಣಿಕಂಡನ್ ಮನೆಯಲ್ಲಿ ಕಳ್ಳರು ಕಳ್ಳತನ ಮಾಡಿದ್ದಲ್ಲದೆ, ಬಳಿಕ ಕಳ್ಳತನ ಮಾಡಿದ ವಸ್ತುವನ್ನು ಮರಳಿಸಿ ಕ್ಷಮೆ ಕೇಳಿದ್ದಾರೆ.

ಇದೇ ತಿಂಗಳಲ್ಲಿ ಕೆಲವೇ ದಿನಗಳ ಮೊದಲು ಮಣಿಕಂಡನ್ ಮನೆಯಲ್ಲಿ ಕಳ್ಳತನವಾಗಿತ್ತು. ಕ‍ಳ್ಳರು ಮನೆಯ ಲಾಕರ್ ಒಡೆದು ಒಂದು ಲಕ್ಷ ರೂ. ಚಿನ್ನ ಮತ್ತು ನಿರ್ದೇಶಕನಿಗೆ ಸಿಕ್ಕಿದ್ದ ರಾಷ್ಟ್ರಪ್ರಶಸ್ತಿಯನ್ನೂ ದೋಚಿ ಪರಾರಿಯಾಗಿದ್ದರು. ಈ ಘಟನೆ ಭಾರೀ ಸುದ್ದಿಯಾಗಿತ್ತು. ರಾಷ್ಟ್ರಪ್ರಶಸ್ತಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ನಿರ್ದೇಶಕನಿಗೆ ಈಗ ಕಳ್ಳರು ಮಾಡಿದ ಕೆಲಸ ಅಚ್ಚರಿ ಮೂಡಿಸಿದೆ.

ರಾಷ್ಟ್ರಪ್ರಶಸ್ತಿ ಕಳೆದೇ ಹೋಯಿತು ಎಂಬ ನಿರಾಸೆಯಲ್ಲಿದ್ದ ಮಣಿಕಂಡನ್ ಗೆ ಕಳ್ಳರು ಅದನ್ನು ಹಿಂತಿರುಗಿಸಿದ್ದಲ್ಲದೆ, ಕ್ಷಮೆ ಕೋರಿ ಪತ್ರವನ್ನೂ ಬರೆದಿದ್ದಾರೆ. ಕಡೈಸಿ ವ್ಯವಸಾಯಿ ಸಿನಿಮಾಗೆ ಮಣಿಕಂಡನ್ ಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. ತಾವು ಕದ್ದ ಮಾಲ್ ನಲ್ಲಿ ರಾಷ್ಟ್ರಪ್ರಶಸ್ತಿಯನ್ನು ಮಾತ್ರ ಹಿಂತಿರುಗಿಸಿರುವ ಕಳ್ಳರು ‘ನಿಮ್ಮ ಶ್ರಮಕ್ಕೆ ಸಿಕ್ಕಿದ ಫಲ ನಿಮ್ಮದು ಮಾತ್ರ’ ಎಂದು ಪತ್ರವನ್ನೂ ಬರೆದಿದ್ದಾರೆ.

ಮಣಿಕಂಡನ್ ಅವರ ಉಸಿಲಾಂಪಟ್ಟಿ ಗ್ರಾಮದ ಮನೆಯಲ್ಲಿ ಕಳ್ಳತನವಾಗಿತ್ತು. ಘಟನೆ ಬಗ್ಗೆ ಮನಿಕಂಡನ್ ಚಾಲಕ ಪೊಲೀಸರಿಗೆ ದೂರು ನೀಡಿದ್ದರು. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಇದರ ನಡುವೆಯೇ ಕಳ‍್ಳರು ಈ ಅಚ್ಚರಿಯ ಕೆಲಸ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ