ಮರಿ ಬದಲಿಗೆ ಮೊಟ್ಟೆ ಇಡುವ ಪ್ರಾಣಿಗಳು

ರಾಮಕೃಷ್ಣ ಪುರಾಣಿಕ

ಮಂಗಳವಾರ, 19 ಡಿಸೆಂಬರ್ 2017 (14:00 IST)
ಮಾಂಸಾಹಾರಿ ಸಸ್ಯಗಳು, ಮರಿ ಹಾಕುವ ಹಾವುಗಳು ಹೀಗೆ ಹತ್ತು ಹಲವು ರೀತಿಯ ಪ್ರಕೃತಿ ವಿಸ್ಮಯಗಳನ್ನು ನೀವು ಓದಿರುತ್ತೀರಿ ಅಥವಾ ತಿಳಿದುಕೊಂಡಿರುತ್ತೀರಿ. ಅದೇ ರೀತಿ ಮೊಟ್ಟೆ ಇಡುವ ಪ್ರಾಣಿಗಳು (ಸಸ್ತನಿಗಳು) ಸಹ ಇವೆ. ಹಾಲನ್ನು ಉಣಿಸುವ ಪ್ರಾಣಿಗಳಿಗೆ ಸಸ್ತನಿಗಳು ಎಂದು ಕರೆಯುತ್ತಾರೆ.

ಹೀಗೆ ಮೊಟ್ಟೆಗಳನ್ನಿಟ್ಟು ಮರಿಗಳಿಗೆ ಹಾಲನ್ನು ಉಣಿಸುವ ಪ್ರಾಣಿಗಳು ಪ್ಲಾಟಿಪಸ್ ಮತ್ತು ಎಕಿಡ್ನಾ. ಪ್ರಪಂಚದಲ್ಲಿ ಈವರೆಗೆ ಐದು ಪ್ರಕಾರದ ಮೊಟ್ಟೆ ಇಡುವ ಸಸ್ತನಿಗಳು ಪತ್ತೆಯಾಗಿವೆ. ಅವುಗಳಲ್ಲಿ ಪ್ಲಾಟಿಪಸ್ ಒಂದಾದರೆ, ಎಕಿಡ್ನಾ ಜಾತಿಯ ನಾಲ್ಕು ಪ್ರಾಣಿಗಳು ಇವೆ.
 
ಈ ಪ್ರಾಣಿಗಳು ಜೀವ ವರ್ಗೀಕರಣದ ಪ್ರಕಾರ ಮೊನೊಟ್ರೆಮಿ ಗಣಕ್ಕೆ ಸೇರಿವೆ. ಮೊನೊಟ್ರೆಮಿ ಎಂದರೆ ಮೊಟ್ಟೆಯಿಡುವ ಪ್ರಾಣಿಯಾಗಿದ್ದು, ಮೂತ್ರಜನಕಾಂಗ, ಜೀರ್ಣಾಂಗ ವ್ಯವಸ್ಥೆಗಳಿಗೆ ಮತ್ತು ಸಂತಾನೋತ್ಪತ್ತಿಗೆ ಒಂದೇ ದ್ವಾರವನ್ನು ಹೊಂದಿರುವ ಜೀವಿಗಳು ಅದನ್ನು ಕ್ಲೋಯಕಾ ಎಂದು ಕರೆಯುತ್ತಾರೆ. ಇವುಗಳು ಬಿಸಿ ರಕ್ತದ ಪ್ರಾಣಿಗಳಾಗಿದ್ದು, ಹೆಚ್ಚು ಚಯಾಪಚಯ ಕ್ರಿಯೆಯ ಶಕ್ತಿಯನ್ನು ಹೊಂದಿವೆ. ಇವುಗಳು ಹೆಚ್ಚಾಗಿ ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾದಲ್ಲಿ ಕಂಡು ಬರುತ್ತವೆ. ಇವು ಸರೀಸೃಪ ಮತ್ತು ಪಕ್ಷಿಗಳಂತೆ ಮೊಟ್ಟೆ ಇಡುತ್ತವೆ. ಆದರೆ ಮರಿಗಳಾದ ಮೇಲೆ ಮೊಲೆತೊಟ್ಟುಗಳ ಬದಲಿಗೆ ಚರ್ಮದಡಿಯಲ್ಲಿನ ಹಾಲನ್ನು (ಮಿಲ್ಕ್ ಪ್ಯಾಚಸ್) ಉಣಿಸುತ್ತವೆ. ಇವುಗಳು ತಮ್ಮ ಎಲೆಕ್ಟ್ರೋರಿಸೆಪ್ಷನ್ ಸಂವೇದನದ ಮೂಲಕ ಬೇಟೆಯನ್ನು ಅರಸಿಕೊಂಡು ಹೋಗುತ್ತವೆ.
 
ಪ್ಲಾಟಿಪಸ್
 
ಪ್ಲಾಟಿಪಸ್ ಬಾತುಕೋಳಿಯ ಕೊಕ್ಕು, ಬೀವರ್‌ನ ಬಾಲ ಮತ್ತು ನೀರುನಾಯಿಯ ದೇಹವನ್ನು ಕೂಡಿ ಮಾಡಿದಂತಹ ದೇಹಾಕೃತಿಯನ್ನು ಹೊಂದಿದ್ದು ಜಾಲಪೊರೆಯುಳ್ಳ ಪಾದಗಳನ್ನು ಹೊಂದಿದೆ. ಇದು ಉಭಯಚರ ಪ್ರಾಣಿಯಾಗಿದೆ. ಇದರ ವೈಜ್ಞಾನಿಕ ಹೆಸರು ಆರ್ನಿಥೊರಿಂಚಸ್ ಅನಟೀನಸ್. ಪ್ಲಾಟಿಪಸ್ ಲ್ಯಾಟಿನ್ ಪದವಾಗಿದ್ದು ಗ್ರೀಕ್ ಮೂಲದ ಪ್ಲಾಟಪಸ್‌ನಿಂದ ಎರವಲು ಪಡೆಯಲಾಗಿದೆ. ಪ್ಲಾಟಪಸ್ ಎಂದರೆ ಚಪ್ಪಟೆಯಾದ ಕಾಲು, ಪ್ಲಾಟಸ್ ಎಂದರೆ ಅಗಲವಾದ, ಚಪ್ಪಟೆಯಾದ ಎಂದರ್ಥ.
 
ಪ್ರಾಯದ ಗಂಡು ಪ್ಲಾಟಿಪಸ್ 50 ಸೆಂಮೀ ಹಾಗೂ ಹೆಣ್ಣು ಪ್ಲಾಟಿಪಸ್ 43 ಸೆಂಮೀ ಇದ್ದು, ಸುಮಾರು 0.7 ರಿಂದ 2.4 ಕೆಜಿವರೆಗೆ ಬೆಳಯುತ್ತದೆ. ಇದರ ದೇಹದ ಉಷ್ಣತೆ ಸರಾಸರಿ 32° ಸೆ ಇರುತ್ತದೆ. ಹೆಣ್ಣು ಪ್ಲಾಟಿಪಸ್ 2-4 ಮೊಟ್ಟೆಗಳನ್ನಿಡುತ್ತದೆ, ಅವುಗಳನ್ನು ಎರಡು ವಾರಗಳಲ್ಲಿ ಮರಿ ಮಾಡುತ್ತದೆ. ಆತ್ಮರಕ್ಷಣೆಗಾಗಿ ಹೆಣ್ಣು-ಗಂಡು ಎರಡೂ ಪ್ಲಾಟಿಪಸ್‌ಗಳು ಹಿಂಗಾಲಿನಲ್ಲಿ ಸ್ಪರ್‌ಗಳನ್ನು ಹೊಂದಿದ್ದು, ಗಂಡು ಮಾತ್ರ ವಿಷವನ್ನು ಹೊಂದಿರುತ್ತದೆ. ಈ ವಿಷ ಸಣ್ಣ ಪ್ರಾಣಿಗಳನ್ನು ಸಾಯಿಸುವಷ್ಟು ಶಕ್ತಿಯನ್ನು ಹೊಂದಿದ್ದು, ಮನುಷ್ಯರಿಗೆ ಅಷ್ಟು ಮಾರಕವಾಗಿಲ್ಲ. ಆದರೆ ವಾರಗಟ್ಟಲೆ ತೀವ್ರ ನೋವನ್ನು ಉಂಟು ಮಾಡಬಲ್ಲದು. ಇವುಗಳ ಜೀವಿತಾವಧಿ 12 ವರ್ಷಗಳಾಗಿದೆ.
 
ಪ್ಲಾಟಿಪಸ್‌ಗಳು ಅತ್ಯುತ್ತಮವಾಗಿ ಈಜುತ್ತವೆ, ಇವುಗಳು ಆಹಾರಕ್ಕಾಗಿ ಕೆಲವು ಸೆಕೆಂಡುಗಳ ಕಾಲ ನೀರಿನಲ್ಲಿರಬಲ್ಲವು. ಪ್ಲಾಟಿಪಸ್ ನೀರಿನಲ್ಲಿರುವಾಗ ಕಿವಿ ಮತ್ತು ಕಣ್ಣುಗಳನ್ನು ಮುಚ್ಚಿಕೊಂಡಿರುತ್ತವೆ. ಇವುಗಳು ತಮ್ಮ ಎಲೆಕ್ಟ್ರೋರಿಸೆಪ್ಷನ್ ಸಂವೇದನದ ಮೂಲಕ ಹುಳಗಳು, ಜಂತುಗಳು, ಸಿಹಿ ನೀರಿನ ಸಿಗಡಿಗಳನ್ನು ಹಾಗೂ ನದಿಯ ಮಣ್ಣುಗಳ ಅಡಿಯಲ್ಲಿನ ಜಂತುಗಳನ್ನು ಕೊಕ್ಕು, ಉಗುರುಗಳ ಮೂಲಕ ಬೇಟೆಯಾಡುತ್ತವೆ. ಇವು ತಮ್ಮ ತೂಕದ 20% ಆಹಾರವನ್ನು ಪ್ರತಿ ದಿನ ಸೇವಿಸುತ್ತವೆ. ಪ್ಲಾಟಿಪಸ್ ದಿನಕ್ಕೆ 14 ಗಂಟೆಗಳ ಕಾಲ ಮಲಗುತ್ತವೆ. ಇವುಗಳು ರಾತ್ರಿ ಪ್ರಾಣಿಗಳಾಗಿದ್ದು, ಮೋಡ ಕವಿದ ವಾತಾವರಣಗಳಲ್ಲಿಯೂ ಹೊರಬರುತ್ತವೆ. ಇವುಗಳನ್ನು ಹಾವುಗಳು, ನೀರು ಇಲಿಗಳು, ಗಿಡುಗ, ಗೂಬೆ, ಹದ್ದುಗಳು ಮತ್ತು ಮೊಸಳೆಗಳು ಬೇಟೆಯಾಡುತ್ತವೆ.
 
ಪ್ಲಾಟಿಪಸ್‌ಗಳನ್ನು 20ನೇ ಶತಮಾನದ ಮೊದಲು ತುಪ್ಪಳಕ್ಕಾಗಿ ಬೇಟೆಯಾಡುತ್ತಿದ್ದರು. ಆದರೆ ಇದೀಗ ಅವುಗಳು ಆಸ್ಟ್ರೇಲಿಯಾದ ಸಂರಕ್ಷಿತ ಜೀವಿಗಳಾಗಿವೆ. ಪ್ಲಾಟಿಪಸ್ ನ್ಯೂ ಸೌತ್ ವೇಲ್ಸ್‌ನ ರಾಜ್ಯ ಪ್ರಾಣಿಯಾಗಿದೆ. ಈ ಪ್ರಾಣಿಯ ಚಿತ್ರವನ್ನು ಆಸ್ಟ್ರೇಲಿಯಾದ 20 ಸೆಂಟ್ ನಾಣ್ಯದಲ್ಲಿ ಮುದ್ರಿಸಲಾಗಿದೆ.
 
ಈ ಪ್ರಾಣಿಯನ್ನು ಮೊದಲ ಬಾರಿಗೆ 18ನೇ ಶತಮಾನದಲ್ಲಿ ಪತ್ತೆಹಚ್ಚಲಾಯಿತು ಹಾಗೂ ಅದನ್ನು ಬ್ರಿಟಿಷ್ ವಿಜ್ಞಾನಿಗಳು ಅಧ್ಯಯನಕ್ಕಾಗಿ ಯುರೋಪ್‌ಗೆ ಕೊಂಡೊಯ್ದಿದ್ದಾರೆ. ಬಹಳಷ್ಟು ಜನರು ಇದರ ದೇಹವನ್ನು ಕಂಡು ಬೀವರ್ ದೇಹದ ಮತ್ತು ಬಾತುಕೋಳಿಯ ಕೊಕ್ಕಿನ ಪ್ರಾಣಿ ಎಂದು ತಮಾಷೆ ಮಾಡಿದ್ದರು.
 
ಎಕಿಡ್ನಾ
 
ಎಕಿಡ್ನಾ ನೋಡಲು ಮುಳ್ಳು ಹಂದಿಯಂತಿದ್ದು ತುಂಬಾ ವಿಲಕ್ಷಣವಾದ ಈ ಜೀವಿ, ಮೈಮೇಲೆ ಒರಟಾದ ಕೂದಲು ಮತ್ತು ಮುಳ್ಳುಗಳನ್ನು ಹಾಗೂ ಉದ್ದನೆಯ ಕೊಕ್ಕನ್ನು ಹೊಂದಿರುತ್ತದೆ. ಇದರ ವೈಜ್ಞಾನಿಕ ಹೆಸರು ಟಾಕಿಗ್ಲೋಸಿಡೆ. ಇದು ಏಕಾಂಗಿಯಾಗಿ ಜೀವಿಸುವ ಪ್ರಾಣಿಯಾಗಿದ್ದು, ಮಧ್ಯಮ ಗಾತ್ರವನ್ನು ಹೊಂದಿರುತ್ತದೆ.
 
ಸಂಪೂರ್ಣ ಬೆಳದಿರುವ ಗಂಡು ಎಕಿಡ್ನಾ 6 ಕೆಜಿ ಇರಬಹುದಾಗಿದ್ದು ಹೆಣ್ಣು 4.5 ಕೆಜಿ ತೂಕವಿರುತ್ತದೆ. ಗಂಡು ಎಕಿಡ್ನಾ ಸಾಮಾನ್ಯವಾಗಿ ಹೆಣ್ಣು ಎಕಿಡ್ನಾಗಿಂತ 25% ದೊಡ್ಡದಾಗಿರುತ್ತದೆ. ಈ ಪ್ರಾಣಿಯ ದೇಹದ ಉಷ್ಣತೆ ಸರಾಸರಿ 32° ಸೆ ಇರುತ್ತದೆ. ಹೆಣ್ಣು ಎಕಿಡ್ನಾ ಒಂದು ವರ್ಷಕ್ಕೆ ಒಂದು ಮೊಟ್ಟೆಯನ್ನು ಮಾತ್ರ ಇಡುತ್ತದೆ. ಅದನ್ನು 10 ದಿನಗಳಲ್ಲಿ ಮರಿ ಮಾಡುತ್ತದೆ. ತದನಂತರ ತಾಯಿ ಎಕಿಡ್ನಾ ತನ್ನ ದೇಹದ ಚೀಲದಲ್ಲಿ ಇರಿಸಿಕೊಂಡಿರುತ್ತದೆ. ಅದನ್ನು 6 ತಿಂಗಳುಗಳವರೆಗೆ ಹಾಲುಣಿಸಿ ಪೋಷಿಸುತ್ತದೆ. ನಂತರ ಅದನ್ನು ತೊರೆಯುತ್ತದೆ. ಆತ್ಮರಕ್ಷಣೆಗಾಗಿ ಮೈಮೇಲೆ ಮುಳ್ಳುಗಳಿರುತ್ತವೆ. ಒಣ ಪ್ರದೇಶದಲ್ಲಿ ವಾಸಿಸುವ ಈ ಜೀವಿ ಅಂದಾಜು 50 ವರ್ಷಗಳವರೆಗೆ ಬದುಕುತ್ತದೆ.
 
ಎಕಿಡ್ನಾಗಳು ಸಮರ್ಥವಾಗಿ ಈಜುತ್ತವೆ. ದೊಡ್ಡ ಉಗುರುಗಳನ್ನು ಹೊಂದಿರುವ ಚಿಕ್ಕದಾದ, ಬಲವಾದ ಕಾಲುಗಳನ್ನು ಹೊಂದಿರುತ್ತವೆ ಮತ್ತು ಇವುಗಳಿಗೆ ಮಣ್ಣನ್ನು ಅಗೆಯಲು ಸಹಾಯಕಾರಿಯಾಗಲೆಂದು ಹಿಂಗಾಲಿನ ಕಾಲುಗಳು ಹಿಮ್ಮುಖವಾಗಿರುತ್ತವೆ. ಸಣ್ಣದಾದ ಬಾಯಿ ಇದ್ದು ದವಡೆಗಳಲ್ಲಿ ಹಲ್ಲುಗಳಿರುವುದಿಲ್ಲ. ತಮ್ಮ ಎಲೆಕ್ಟ್ರೋರಿಸೆಪ್ಷನ್ ಸಂವೇದನೆಯನ್ನು ಬಳಸಿಕೊಂಡು ಎಕಿಡ್ನಾ ತನ್ನ ಆಹಾರವನ್ನು ಉದ್ದವಾದ, ಅಂಟಿನಿಂದ ಕೂಡಿದ ನಾಲಿಗೆಯ ಸಹಾಯದಿಂದ ಪಡೆದುಕೊಳ್ಳುತ್ತದೆ. ಇವುಗಳು ಹೆಚ್ಚಾಗಿ ಇರುವೆಗಳನ್ನು ತಿನ್ನುತ್ತವೆ, ಆದ್ದರಿಂದ ಇದಕ್ಕೆ ಮುಳ್ಳು ಇರುವೆಬಾಕ (ಸ್ಪಿನ್ನಿ ಆಂಟ್ಇಟರ್ಸ್) ಎಂತಲೂ ಕರೆಯುತ್ತಾರೆ.
 
ಎಕಿಡ್ನಾಗಳು ತೀವ್ರವಾದ ಉಷ್ಣಾಂಶವನ್ನು ತಡೆದುಕೊಳ್ಳುವುದಿಲ್ಲ, ಆದ್ದರಿಂದ ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಆಶ್ರಯಕ್ಕೆ ಗುಹೆಗಳು ಮತ್ತು ಬಂಡೆಯ ಬಿರುಕುಗಳಲ್ಲಿ ಸೇರಿಕೊಳ್ಳುತ್ತವೆ. ಅವುಗಳಿಗೆ ಅಪಾಯ ಎಂದು ಭಾವಿಸಿದಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಣ್ಣಿನಲ್ಲಿ ಹೂತುಕೊಳ್ಳಲು ಪ್ರಯತ್ನಿಸುತ್ತವೆ ಅಥವಾ ಅವುಗಳು ಚೆಂಡಿನಾಕಾರವನ್ನು ಪಡೆದುಕೊಳ್ಳುತ್ತವೆ. ಈ ಎರಡೂ ವಿಧಾನಗಳಲ್ಲಿ ತಮ್ಮ ಮುಳ್ಳುಗಳನ್ನು ಅವುಗಳು ಬಳಸುತ್ತವೆ. ಕಾಡು ಬೆಕ್ಕುಗಳು, ನರಿಗಳು, ನಾಯಿಗಳು ಮತ್ತು ಉಡಗಳಿಂದ ಇವುಗಳಿಗೆ ಅಪಾಯ ತಪ್ಪಿದ್ದಲ್ಲ. ಹಾವುಗಳು ಎಕಿಡ್ನಾ ಮರಿಗಳನ್ನು ಬೇಟೆಯಾಡುವುದರಿಂದ ಅವುಗಳ ಸಂತತಿ ಕ್ಷೀಣಿಸುತ್ತಿದೆ.
 
ಈ ಎರಡು ಮೊಟ್ಟೆಯಿಡುವ ಸಸ್ತನಿಗಳು ನಿಸರ್ಗದಲ್ಲಿ ವಿಸ್ಮಯಕಾರಿಯಾಗಿ ಜೀವನ ಶೈಲಿಯನ್ನು ಹೊಂದಿವೆ. ಈ ಜೀವಿಗಳು ಇದೀಗ ವಿವಿಧ ಕಾರಣಗಳಿಂದಾಗಿ ಅಳಿವಿನಂಚಿಗೆ ತಲುಪಿವೆ. ಇವುಗಳ ರಕ್ಷಣೆಗೆ ಆಸ್ಟ್ರೇಲಿಯಾ ಸರ್ಕಾರ ಹಲವಾರು ಸಂರಕ್ಷಣೆಯ ಕ್ರಮಗಳನ್ನು ತೆಗೆದುಕೊಂಡಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ