ಎರಡು ಮುಖಗಳು-2

ಅದು ಯಾವಾಗಲೂ ಉಂಟಾ?ವರ್ಷಕ್ಕೆ ಒಂದ್ಸಲ,ಅದೂ ಐದು ನಿಮಿಷ ಮಾತ್ರ ಅಲ್ವಾ?ಅದೇನು ಅವರು ಮಸೀದಿಯ ಎದುರು ರಸ್ತೆಯನ್ನು ಗುತ್ತಿಗೆ ಪಡೆದಿದ್ದ್ದಾರ?ಅವರೂ ಕೂಡ ಅವರ ಪೈಗಂಬರ್ ದಿನದಂದು ಮೆರವಣಿಗೆ ನಡೆಸುವುದಿಲ್ಲವಾ?ಆ ಪ್ರಜ್ಞೆ ಅವರಿಗಿಲ್ವಾ?"

"ಇದೆಲ್ಲಾ ನಿನ್ನ ಅಜ್ಞಾನದ ,ಅರ್ಥಹೀನದ ಮಾತುಗಳು.ಈ ದುಡುಕಿನಿಂದ ಬಲಿಪಶು ಆಗುವುದು ಬಡವರು ಗೊತ್ತಾ?"

"ಬಲಿಪಶು ಅಂತೆ ,ಬಲಿಪಶು .ನಮ್ಮ ಗೌರ್ನಮೆಂಟು ಧೈರ್ಯ ತೋರಿ ಅಣುಬಾಂಬ್ ಸಿಡಿಸದಿದ್ದಲ್ಲಿ ಏನಾಗುತ್ತಿತ್ತು ಗೊತ್ತಾ?ಪಾಕಿಸ್ತಾನಿಗಳ ಅಣುಶಕ್ತಿ ಪ್ರಮಾಣ ಎಷ್ಟೂಂತ ನಂತರವಲ್ಲವಾ ನಮಗೆ ಗೊತ್ತಾದದ್ದು?"

"ಯಾವ ಬಾಂಬ್ ಸಿಡಿಸಿದರೇನು?ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ,ಜನತೆ ಉದ್ಯೋಗವಿಲ್ಲದೆ ತತ್ತರಿಸುತ್ತಾರೆ.ಧರ್ಮದ ಹೆಸರಲ್ಲಿ ಆತ್ಮಹತ್ಯೆ,ಅತ್ಯಾಚಾರ,ಕೊಲೆ ಸಂಖ್ಯೆ ಹೆಚ್ಚುತ್ತಲಿದೆ.ಅದನ್ನೆಲ್ಲಾ ನಿಯಂತ್ರಿಸಲಿಕ್ಕಾಯಿತಾ?"

"ಅದನ್ನೆಲ್ಲಾ ನಿಯಂತ್ರಿಸುವುದಾದರೂ ಹೇಗೆ?ಈ ಮಕ್ಕಳು ನಾಲ್ಕಾಲ್ಕು ಮದುವೆಯಾಗ್ತಾರೆ.ಹತ್ತ್ಹತ್ತು ಮಕ್ಕಳನ್ನು ಹುಟ್ಟಿಸುತ್ತಾರೆ.ಇನ್ನು ಇವರಲ್ಲಿ ಮಾತನಾಡಬೇಕಾದರೆ ನಾವು ಪದಗಳಿಗಾಗಿ,ಇದರ ಅರ್ಥಕ್ಕಾಗಿ 'ಪದಕೋಶ-ಅರ್ಥಕೋಶ'ಗಳನ್ನು ನೋಡಬೇಕಾದೀತು.ಇಲ್ಲವೇ ಅವರಲ್ಲಿ ಮಾತನಾಡಲು ಅರ್ಜಿಹಾಕಿ ಕಾಯಬೇಕಾದೀತು.ಇವರಿಗೆ ಸ್ವಲ್ಪವಾದರೂ ದೇಶಪ್ರೇಮ ಎಂಬುದಿದ್ದರೆ,ಈ ರೀತಿಯ ರಗಳೆ ಇರ್ತಿತ್ತಾ?ಇವರಿಗೆ,ನಮ್ಮ ಸಮಾನ ನಾಗರಿಕ ಸಂಹಿತೆ ಪಾಲಿಸಲಿಕ್ಕಾಗುವುದಿಲ್ಲ.ಅಷ್ಟೇಕೆ ನೋಡು, ಅವರ ಬುರ್ಖಾ ಉಂಟಲ್ಲ.ಅದರೊಳಗೆ ನಡೆಯುವ ಕಸರತ್ತು ಒಂದಾಎರಡಾ?ಈ ಮಕ್ಕಳ ಪ್ರತ್ಯೇಕತೆ ಎಷ್ಟೆಂದರೆ ಇವರ ಅಧೀನದಲ್ಲಿರುವ ಶಾಲಾ ಕಾಲೇಜುಗಳಿಗೆ ವಾರದ ರಜೆಯನ್ನು ಶುಕ್ರವಾರ ಕೊಡ್ತಾರೆ.ಇವರಿಗೆ ವಂದೇಮಾತರಂ ಅಥವಾ ಸರಸ್ವತಿ ವಂದನೆ ಪಥ್ಯವಾಗುವುದಿಲ್ಲ. ಅದೆಲ್ಲಾ ಯಾಕಾಯಿತು?ಹೇಗಾಯಿತು?ಎಂಬುದರ ಬಗ್ಗೆ ನೀನೇಕೆ ಚಿಂತಿಸಿಲ್ಲ?"

"ನೀನು,ಅದು ಸರಿಯಾ ಇದು ಸರಿಯಾ ಅಂತ ಕೇಳ್ತೀಯಲ್ಲ.ನೋಡು ನಮ್ಮ ಸರ್ಕಾರಿ ಕಛೇರಿ ಉಂಟಲ್ಲ,ಅದಕ್ಕೆ ಜಾತಿ ಮತ ಭೇದ ಇರಬಾರದು. ಯಾಕೆಂದರೆ ಎಲ್ಲಾ ಜಾತಿಯವರು ಈ ಕಛೇರಿಯಡಿ ದುಡಿಯುತ್ತಾರೆ.ಆದರೆ ಅಲ್ಲಿ ನಮ್ಮ ಹಿಂದೂ ದೇವರುಗಳ ಫೋಟೋ ಇಡುವುದೆಷ್ಟು ಸಮಂಜಸ?"

"ಅದೊಂದು 'ಸಿಲ್ಲಿ'ವಿಷಯ.ಇಲ್ಲಿ ಬಹುಪಾಲು ಮಂದಿ ಹಿಂದೂಗಳಲ್ವಾ?ನೋಡು ಅವರಂತೆ ನೂರಾರು ಬೇಡಿಕೆ ಮುಂದಿಡ್ತೇವಾ?ಈ ಮಕ್ಕಳ ಪೂರ್ವಜರು ನಮ್ಮ ಎಷ್ಟೊಂದು ಸಂಪತ್ತು ಲೂಟಿ ಮಾಡಿದರು?ಎಷ್ಟೊಂದು ದೇವಸ್ಥಾನ ಕೆಡವಿದರು?ಅಧಿಕಾರದ ಬಲದಲ್ಲಿ ಎಷ್ಟೊಂದು ಮಂದಿಯನ್ನು ಮತಾಂತರಿಸಿದರು ?ಇವರಲ್ಲಿ ಒಬ್ಬ ಪಾಕಿಸ್ತಾನಕ್ಕೆ ಹೋಗಿ ಮಸೀದಿಯೊಂದರಲ್ಲಿ ಒಂದೇ ಸಾಲಲ್ಲಿ ನಿಂತು ನಮಾಜು ಮಾಡಿ ತನ್ನ ಪರಿಚಯ ತಿಳಿಸಿ,ನಾನು ಅಪ್ಪಟ ಮುಸಲ್ಮಾನ ?ಅಂತ ತಿಳಿಸಿದರೂ ಮಸೀದಿಯಿಂದ ಹೊರಗಿಳಿದ ಕೂಡಲೇ ,ನಿಜವಾಗಿಯೂ ನೀನು ಮುಸ್ಲೀಮನಾ?ಅಂತ ಕೇಳುವ ಗುಣ ಪಾಕಿಸ್ತಾನಿಗಳದ್ದು. ಅಷ್ಟೇಕೆ 'ಅಲ್ಲಾನ ಮೇಲೆ ಆಣೆ ಹಾಕಿ ನಾನು ಮುಸಲ್ಮಾನ ಅಂತ ನಾಲಗೆ ಉಚ್ಚರಿಸಿದರೂ 'ಥಕ್..ಬಟ್ಟೆಬಿಚ್ಚು ಅಂತ ಹೇಳಿ ಶಾಸ್ತ್ರ ಪ್ರಕಾರ ನಡೆದಿದೆಯಾ ಅಂತ ನೋಡುವವರವರು!ಅವರ ಅಂಥಾ ಬುದ್ಧಿ ಗೊತ್ತಿದ್ದೂ ಈ ಮಕ್ಕಳು ಇಲ್ಲಿ ಅವರಿಗಾಗಿ ಜೀವ ಬಿಡುವುದೆಂದರೆ!?ಅದೇನು ಅಲ್ಲಿ ಚಿನ್ನದ ಗಟ್ಟಿ ಉಂಟಾ,ಹಣದ ಕಟ್ಟು ಉಂಟಾ? ಇದಕ್ಕೆಲ್ಲಾ ಇರುವ ದಾರಿ ಒಂದೆ, ನೀವು ಪಾಕಿಸ್ತಾನಕ್ಕೆ ಹೋಗುತ್ತೀರಾ ಅಂತ ನೇರವಾಗಿ ಕೇಳುವುದು.ಹೋಗುವವರಿದ್ದರೆ,ಅಟ್ಟಿಸಿ ಬಿಡುವುದು.ಆಗ ಗೊತ್ತಾಗುತ್ತದೆ ಇವರ ದೇಶಪ್ರೇಮ".

- ಹಂಝ ಮಲಾರ್

ಲೇಖಕರ ಪರಿಚಯ - ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಂಝ ಮಲಾರ್ ತನ್ನದೇ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಬರೆಯಲಾರಂಭಿಸಿರುವ ಹಂಝ, ಮುಸ್ಲಿಂ ಬದುಕಿನ ಒಳಹೊರಗುಗಳ ಸುತ್ತ ಹಲವಾರು ಕಥೆಗಳನ್ನು ಹೆಣೆದಿದ್ದಾರೆ. ಇವರ ಅನೇಕ ಕಾದಂಬರಿಗಳೂ ಪ್ರಕಟವಾಗಿವೆ.

(ಮುಂದುವರಿದುದು...)
--

ವೆಬ್ದುನಿಯಾವನ್ನು ಓದಿ