ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ದದ 2ನೇ ಫೋಕ್ಸೋ ಕೇಸ್ ಹಿನ್ನೆಲೆಯಲ್ಲಿ, ಶಿವಮೂರ್ತಿ ಶರಣರಿಗೆ ಮತ್ತೆ ಬಂಧನದ ವಾರೆಂಟ್ ಕೊಡುವ ಸಂಬಂಧ ಇಂದು ಕೋರ್ಟ್ ತನ್ನ ತೀರ್ಪು ನೀಡಲಿದೆ. ನವೆಂಬರ್ 16ರಂದು ಶಿವಮೂರ್ತಿ ಶರಣರಿಗೆ ಬಂಧನ ವಾರೆಂಟ್ ಹೊರಡಿಸುವಂತೆ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಈಗಾಗಲೇ 2ನೇ ಫೋಕ್ಸೋ ಕೇಸ್ ವಿಚಾರಣೆಗೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ.
ಹಾಗಾಗಿ ಶಿವಮೂರ್ತಿ ಶರಣರಿಗೆ ಬಂಧನದ ವಾರೆಂಟ್ ನೀಡುವ ಅಗತ್ಯವಿಲ್ಲವೆಂದು ಶಿವಮೂರ್ತಿ ಶರಣರ ಪರ ವಕೀಲ ಉಮೇಶ್ ಪ್ರತಿವಾದ ಮಂಡಿಸಿದ್ದರು. ಎರಡೂ ಕಡೆಯ ವಾದವನ್ನು ಆಲಿಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಕೋಮಲ, ಹೈ ಕೋರ್ಟ್ ನಿಂದ ಸ್ಪಷ್ಟನೆ ತರುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಇಂದಿಗೆ ಮುಂದೂಡಿದ್ದರು. ಅಲ್ಲದೆ ಶಿವಮೂರ್ತಿ ಶರಣರು ಚಿತ್ರದುರ್ಗ ಪ್ರವೇಶಿಸುವಂತಿಲ್ಲ ಎಂಬ ಶರತ್ತಿನೊಂದಿಗೆ ಜಾಮೀನು ಮಂಜೂರು ಮಾಡಿದ್ದರು.