ಸಿಎಂ ಸಿದ್ದರಾಮಯ್ಯಗೆ ನೈತಿಕತೆ ಅನ್ನೋದು ಏನಾದ್ರೂ ಇದ್ರೆ ರಾಜೀನಾಮೆ ಕೊಡಲ: ಎ ನಾರಾಯಣಸ್ವಾಮಿ

Krishnaveni K

ಶನಿವಾರ, 13 ಜುಲೈ 2024 (15:13 IST)
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯವರು ಹಗರಣಗಳಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅವರು ಆಗ್ರಹಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಅನಾವರಣ ಆಗಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಸರಕಾರವು ದಲಿತವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಅದನ್ನು ಖಂಡಿಸುತ್ತೇವೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಸಮಾಜವಾದದ ಚಿಂತನೆಗಳು ಕಳಚಿ ಬಿದ್ದಿವೆ. ಸಮಾಜವಾದದ ಚಿಂತನೆ ಇದ್ದರೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿರಲಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಪರಿಶಿಷ್ಟ ಪಂಗಡದ 17 ಶಾಸಕರಿದ್ದಾರೆ. ಈ ಪೈಕಿ 16 ಜನರು ಕಾಂಗ್ರೆಸ್ಸಿನವರು ಎಂದು ಅವರು, 3 ಜನ ಲೋಕಸಭಾ ಸದಸ್ಯರು ಗೆದ್ದಿದ್ದಾರೆ. ವಾಲ್ಮೀಕಿ ನಿಗಮಕ್ಕೆ ಮಾರ್ಚ್ 21ರಂದು ರಾಜ್ಯ ಸರಕಾರವು 187 ಕೋಟಿ ಹಣವನ್ನು ವರ್ಗಾವಣೆ ಮಾಡಿತ್ತು. ಮೇ 26ರವರೆಗೆ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಳ್ಳುವವರೆಗೆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ಹಗರಣ ಬಂದಿಲ್ಲವಾದರೆ ಆ ಎರಡು ತಿಂಗಳು ಕರ್ನಾಟಕದಲ್ಲಿ ಸರಕಾರ ಇತ್ತೇ ಎಂದು ಪ್ರಶ್ನಿಸಿದರು.

ಅರಣ್ಯ ಪ್ರದೇಶದಲ್ಲಿ ವಾಸವಿರುವ ಜನಾಂಗದವರಿಗೂ ಈ ವಿಷಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಸಂದೇಹ ಉಂಟಾಗಿದೆ. ಹಗರಣದ ಚರ್ಚೆ ನಡೆದಾಗ ಸಚಿವರಿಗೂ ಹಗರಣಕ್ಕೂ ಸಂಬಂಧ ಇಲ್ಲ ಎಂದೇ ಮುಖ್ಯಮಂತ್ರಿಯವರು ಹೇಳಿದ್ದರು. ಎಸ್‍ಐಟಿ ರಚಿಸಿದ ಬಳಿಕ ಕೂಡ ಸಚಿವರು ನಿರಪರಾಧಿ ಎಂದೇ ಹೇಳಿದ್ದರು ಎಂದು ಗಮನ ಸೆಳೆದರು.
 
ಸಮಾಜವಾದಿ ಎಂಬ ಪದಕ್ಕೆ ಕಳಂಕ..
ನಾಗೇಂದ್ರರನ್ನು ಇ.ಡಿ. ಬಂಧಿಸಿದ ಬಳಿಕ ಖಾಸಗಿ, ನಕಲಿ ಖಾತೆಗಳಿಗೆ ಹಣ ವರ್ಗಾವಣೆ, ನಾಗೇಂದ್ರರ ಕೈವಾಡದ ಕುರಿತು ಮುಖ್ಯಮಂತ್ರಿಗಳನ್ನು ಮಾಧ್ಯಮದವರು ಪ್ರಶ್ನಿಸಿದ್ದರು. ಯಾವ ವರದಿ ಬಂದಿದೆ? ಎಂಬ ಅವರ ಪ್ರಶ್ನೆ, ಸಮಾಜವಾದಿ ಎಂಬ ಪದಕ್ಕೆ ಕಳಂಕ ತಂದಂತಿದೆ. ಪದೇಪದೇ ನಾನು ಹಿಂದುಳಿದ ವರ್ಗಗಳ ನಾಯಕ ಎನ್ನುವ ಸಿದ್ದರಾಮಯ್ಯನವರು ದಲಿತರಿಗೆ, ಶೋಷಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ವರ್ಗಾಯಿಸಿದ್ದಾರೆ. ಹಾಗಿದ್ದರೆ ಅವರು ಯಾವ ನೈತಿಕತೆಯಲ್ಲಿ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಎ.ನಾರಾಯಣಸ್ವಾಮಿ ಅವರು ಕೇಳಿದರು.

ವಿದ್ಯಾಸಿರಿ ನಿಲ್ಲಿಸಿದ್ದಾರೆ. ಶೂ ಕೊಡಲು ಯೋಗ್ಯತೆ ಇಲ್ಲ. ಮಕ್ಕಳಿಗೆ ಪುಸ್ತಕ ಕೊಡುತ್ತಿಲ್ಲ; ಹಾಸ್ಟೆಲ್‍ಗಳಲ್ಲಿ ಊಟವನ್ನೂ ನೀಡುತ್ತಿಲ್ಲ. ಹಲವು ಮಕ್ಕಳು ವಿದ್ಯಾಭ್ಯಾಸ ನಿಲ್ಲಿಸಿದ್ದಾರೆ ಎಂದು ಟೀಕಿಸಿದರು.
 
ಗ್ಯಾರಂಟಿಗಳ ಮೂಲಕ ನಿಗಮಗಳ ಕತ್ತನ್ನೇ ಹಿಸುಕಿದ್ದಾರೆ. ಜನಸಂದರ್ಶನದ ವೇಳೆ ಯುವಕರ ಕೊಟ್ಟ ಅರ್ಜಿಗಳನ್ನು ತಿಪ್ಪಗೆ ಎಸೆಯಲಾಗಿದೆ. ಇದು ಸಾಮಾಜಿಕ ಕಳಕಳಿಯನ್ನು ಅರ್ಥ ಮಾಡುವಂತಿದೆ ಎಂದು ವ್ಯಂಗ್ಯವಾಗಿ ನುಡಿದರು. ಖಜಾನೆ ಖಾಲಿ ಮಾಡಿಕೊಂಡು ಸರಕಾರ ನಡೆಸಲು ಯೋಗ್ಯತೆ ಇಲ್ಲದೆ ಇದ್ದರೆ, ದಲಿತರ ಹಣದಲ್ಲಿ ಸರಕಾರ ನಡೆಸುವುದಾದರೆ ದಯವಿಟ್ಟು ಕುರ್ಚಿ ಬಿಟ್ಟು ಮನೆ ಕಡೆ ಹೋಗಿ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಬೀದಿಗೊಂದು ದಲಿತ ಸಂಘಟನೆಗಳಿವೆ. ಅನೇಕ ಹೋರಾಟಗಾರರೂ ಇದ್ದಾರೆ. ದಲಿತ ವಿರೋಧಿ ಆಡಳಿತ ಕೊಡುತ್ತಿದ್ದರೂ ರಾಜ್ಯದ ದಲಿತ ನಾಯಕರು ಮಾತನಾಡಿಲ್ಲ. ಎಲ್ಲ ಪ್ರಾಮಾಣಿಕ ದಲಿತ ನಾಯಕರು ದಲಿತರ ಹಣ ದುರುಪಯೋಗದ ಬಗ್ಗೆ ಧ್ವನಿ ಆಗಬೇಕು; ನ್ಯಾಯ ಕೊಡಿಸಬೇಕು ಎಂದು ಪ್ರಾರ್ಥಿಸಿದರು.

ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಎಸ್‍ಇಪಿ ಟಿಎಸ್‍ಪಿ ದಲಿತರ ಹಣ ದುರುಪಯೋಗದ ಬಗ್ಗೆ ನಾವು ಹಲವು ಬಾರಿ ಗಮನ ಸೆಳೆದಿದ್ದೇವೆ. ಕಳೆದ ಆರ್ಥಿಕ ವರ್ಷದಲ್ಲಿ ದಲಿತ ಸಮುದಾಯದ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟಿದ್ದ 11,114 ಕೋಟಿ ರೂ.ಗಳನ್ನು ಈ ಸರಕಾರ ಬೇರೆ ಬೇರೆ ಕಾರ್ಯಗಳಿಗೆ ದುರುಪಯೋಗ ಪಡಿಸಿಕೊಂಡಿತ್ತು ಎಂದು ಆಕ್ಷೇಪಿಸಿದರು.

7 ಡಿ ರದ್ದು ಮಾಡುವುದಾಗಿ ಹೇಳಿದ್ದರು. ಅದರಂತೆ 7 ಡಿ ರದ್ದು ಮಾಡಿದ್ದರು. ಆದರೂ, ದಲಿತರಿಗಾಗಿ ಮೀಸಲಿಟ್ಟ 14282 ಕೋಟಿ ರೂಗಳನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. 7 ಡಿ ರದ್ದು ಮಾಡಿದ್ದು, 7 ಸಿ ನಲ್ಲಿ ಗ್ಯಾರಂಟಿಗೆ ಹಣ ಕೊಡುತ್ತಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದರಲ್ಲದೆ, ಲೂಟಿ ಮಾಡುವುದಾದರೆ ಹಿಂದಿನ ಬಾಗಿಲಾದರೇನು, ಮುಂದಿನ ಬಾಗಿಲಾದರೆ ಏನು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯರ ನೇತೃತ್ವದ ಇದು ಲೂಟಿ ಸರಕಾರ. ದಲಿತರ ಏಳಿಗೆಯನ್ನು ಸಹಿಸದ ಸರಕಾರ ಎಂದು ಟೀಕಿಸಿದ ಅವರು, ಉಪ ಯೋಜನೆಯಡಿ ಸೇರಿದ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಾರ್ಮಿಕ ದೈಹಿಕ ವಿಕಲಚೇತನರ ಸ್ಕೀಮ್‍ಗಳಿಗೆ ಬಳಸುವಂತೆ 7 ಸಿ ಹೇಳುತ್ತದೆ. ಆದರೆ, ಗ್ಯಾರಂಟಿಗಳು ಇದರಡಿ ಬರುವುದಿಲ್ಲ ಎಂದು ಎಚ್ಚರಿಸಿದರು.

ಗ್ಯಾರಂಟಿಗಳನ್ನು ನೀವು ಮತಬ್ಯಾಂಕ್ ತೆವಲಿಗಾಗಿ ಮಾಡಿಕೊಂಡದ್ದೇ ಹೊರತು ಇದು ಜನರ ಅಭಿವೃದ್ಧಿಗಾಗಿ ಮಾಡಿದ್ದಲ್ಲ. ಇದು ತಾತ್ಕಾಲಿಕವಾಗಿ ಅವರನ್ನು ಮೆಚ್ಚಿಸುವ, ಮೂಗಿಗೆ ತುಪ್ಪ ಸವರುವ ಕಾರ್ಯಕ್ರಮ ನಮಗೆ ಬೇಕಿರಲಿಲ್ಲ. ಯಾರೂ ನಿಮಗೆ ಅರ್ಜಿ ಕೊಟ್ಟು ಕೇಳಿರಲಿಲ್ಲ ಎಂದು ನುಡಿದರು.
ದಲಿತರ ಮಕ್ಕಳಿಗೆ ಸ್ಕಾಲರ್‍ಶಿಪ್ ಬರುತ್ತಿಲ್ಲ. ಸ್ಕಾಲರ್‍ಶಿಪ್ ಪಡೆದು ಉನ್ನತ ಶಿಕ್ಷಣಕ್ಕೆ ಹೊರದೇಶಗಳಿಗೆ ಹೋಗುತ್ತಿದ್ದರು. ಈ ವರ್ಷದಿಂದ ಅದನ್ನೂ ರದ್ದು ಮಾಡಿದ್ದಾರೆ. ನಿಮ್ಮ ಕಾಳಜಿ ಏನು? ದಲಿತರಿಗೆ ಬೇರೆ ಸರಕಾರಗಳಿಗಿಂತ 3 ಸಾವಿರ ಕೋಟಿ ಹೆಚ್ಚು ಕೊಟ್ಟಿದ್ದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅನೌನ್ಸ್ ಮಾಡಿದರೂ ಜನರಿಗೆ ಅದು ತಲುಪದಿದ್ದರೆ ಹೇಗೆ? ಎಂದು ಕೇಳಿದರು.

ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಎನ್.ಮಹೇಶ್ ಅವರು ಮಾತನಾಡಿ, ದಲಿತ ಫಲಾನುಭವಿಗಳಿಗೆ ಭೂಮಿ ಕೊಡಲು ವಿವಿಧ ನಿಗಮಗಳಿಗೆ 1,169 ಕೋಟಿ ಬೇಕಿದೆ. ಈ ಕಡೆ ಸಿದ್ದರಾಮಯ್ಯರ ಸರಕಾರ ಗಮನ ಕೊಟ್ಟಿಲ್ಲ. ಗಂಗಾ ಕಲ್ಯಾಣ ಯೋಜನೆಯನ್ನೂ ಕಡೆಗಣಿಸಿದೆ. ಇದಕ್ಕೆ 650 ಕೋಟಿ ಕೊಡಬೇಕಿದೆ ಎಂದು ತಿಳಿಸಿದರು. ಆದರೆ, ಬಜೆಟ್‍ನಲ್ಲಿ ಕೇವಲ 510 ಕೋಟಿ ಇಟ್ಟಿದ್ದು, ಇವರ ಉದ್ದೇಶ ಏನು ಎಂದು ಕೇಳಿದರು.

ಈ ವಿಷಯವನ್ನು ಸದನದಲ್ಲೂ, ಸದನದ ಹೊರಗಡೆಯೂ ಪ್ರಶ್ನಿಸಲಿದ್ದೇವೆ. 25 ಸಾವಿರ ಕೋಟಿ ಹಣವನ್ನು ದುರುಪಯೋಗ ಮಾಡಿದ್ದು, ಸಿದ್ದರಾಮಯ್ಯ, ಮಹದೇವಪ್ಪನವರಿಗೆ ನಾಚಿಕೆ ಆಗಬೇಡವೇ ಎಂದು ಎನ್.ಮಹೇಶ್ ಅವರು ಕೇಳಿದರು. ಸಂವಿಧಾನದ ಪುಸ್ತಕ ಹಿಡಿದು ತಿರುಗಾಡುತ್ತಾರೆ. ಎಸ್‍ಸಿಎಸ್‍ಟಿಗಳ ಹಣ ಈ ರೀತಿ ದುರುಪಯೋಗ ಆಗುತ್ತಿದೆಯಲ್ಲವೇ ಎಂದರು. ಕಾಂಗ್ರೆಸ್ ಸರಕಾರ ದಲಿತ ವಿರೋಧಿ ಮತ್ತು ಸಂವಿಧಾನ ವಿರೋಧಿ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಮಾತನಾಡಿ, ಸಿದ್ದರಾಮಯ್ಯನವರು ದಲಿತರ ಅನ್ನದ ತಟ್ಟೆಗೆ ಕೈ ಹಾಕಿದ್ದಾರೆ ಎಂದು ಟೀಕಿಸಿದರು. ಎಲ್ಲ ದಲಿತ ಸಂಘಟನೆಗಳು ತಮ್ಮ ಹಕ್ಕಿಗಾಗಿ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಅವರು ಮಾತನಾಡಿ, ದಲಿತ ಶಾಸಕರು ತಮಗಾದ ಅನ್ಯಾಯಗಳ ಕುರಿತು ಧ್ವನಿ ಎತ್ತಬೇಕು. ಅಲ್ಲದೆ ಸ್ವಾಭಿಮಾನ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಬೇಕು ಎಂದು ತಿಳಿಸಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ