ವಾಲ್ಮೀಕಿ ಹಗರಣ: ಮಾಜಿ ಸಚಿವ ನಾಗೇಂದ್ರ ಸತತ 7 ಗಂಟೆ ವಿಚಾರಣೆ, ಇನ್ನು 6 ದಿನ ಇಡಿ ಕಸ್ಟಡಿಗೆ

Krishnaveni K

ಶನಿವಾರ, 13 ಜುಲೈ 2024 (10:52 IST)
ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ನಾಗೇಂದ್ರರನ್ನು ನಿನ್ನೆ ವಶಕ್ಕೆ ಪಡೆದಿದ್ದ ಇಡಿ ಅಧಿಕಾರಿಗಳು ಸತತ 7 ಗಂಟೆ ವಿಚಾರಣೆಗೊಳಪಡಿಸಿದ್ದರು. ಇದೀಗ ನ್ಯಾಯಾಲಯ ಅವರನ್ನು 6 ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ಇಡಿ ವಶಕ್ಕೊಪ್ಪಿಸಿದೆ.

ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಹಗರಣ ಮಾಡಿಕೊಂಡಿರುವ ಮಾಜಿ ಸಚಿವ ನಾಗೇಂದ್ರರನ್ನು ನಿನ್ನೆ ಇಡಿ ವಶಕ್ಕೆ ಪಡೆದುಕೊಂಡಿತ್ತು. ಇದಾದ ಬಳಿಕ ಇಂದು ಅವರನ್ನು ಯಲಹಂಕದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಅವರನ್ನು ಹೆಚ್ಚಿನ ವಿಚಾರಣೆಗೆ 6 ದಿನಗಳಿಗೆ ಇಡಿ ವಶಕ್ಕೊಪ್ಪಿಸಲಾಗಿದೆ.

ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವುದಕ್ಕೆ ಸಚಿವ ನಾಗೇಂದ್ರ ವಿರುದ್ಧ 10 ಕ್ಕೂ ಹೆಚ್ಚು ಸಾಕ್ಷ್ಯ ಸಿಕ್ಕಿದೆ ಎನ್ನಲಾಗಿದೆ. ಬಲವಾದ ಸಾಕ್ಷ್ಯ ಕಲೆ ಹಾಕಿದ ಬಳಿಕವೇ ಇಡಿ ನಾಗೇಂದ್ರ ಅವರನ್ನು ಬಂಧಿಸಿತ್ತು. ಇಡಿ ಅಧಿಕಾರಿಗಳು ನ್ಯಾಯಾಧೀಶರಿಗೆ 10 ದಿನಗಳ ಕಾಲ ವಶಕ್ಕೆ ನೀಡುವಂತೆ ಕೇಳಿಕೊಂಡಿತ್ತು. ಆದರೆ ನ್ಯಾಯಾಧೀಶರು 6 ದಿನ ವಶಕ್ಕೆ ನೀಡಿದ್ದಾರೆ.

ಜುಲೈ 18 ಕ್ಕೆ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ನ್ಯಾಯಾಧೀಶರ ಮುಂದೆ ಬರುತ್ತಿದ್ದಂತೇ ನಾಗೇಂದ್ರ ತಮ್ಮ ಆರೋಗ್ಯ ಸಮಸ್ಯೆಗಳ ಪಟ್ಟಿಯನ್ನೇ ತೆರೆದಿಟ್ಟಿದ್ದಾರೆ. ತಮಗೆ ಬಿಪಿ ಇದೆ, ಸುಸ್ತು ಇದೆ ಎಂದಿದ್ದಾರೆ. ಹೀಗಾಗಿ ಪ್ರತಿ ದಿನ 3 ಗಂಟೆ ವಿಚಾರಣೆ 30 ನಿಮಿಷ ವಿಶ್ರಾಂತಿ ನೀಡಲು ಸೂಚಿಸಲಾಗಿದೆ. ಅಲ್ಲದೆ, ಸೂಕ್ತ ವೈದ್ಯಕೀಯ ತಪಾಸಣೆ ನಡೆಸಲೂ ಸೂಚಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ