ಮಾಜಿ ಸಚಿವ ನಾಗೇಂದ್ರ ವಿರುದ್ಧ ಎಸ್ಐಟಿ ತನಿಖೆ ಸಾಕಿತ್ತು, ಇಡಿ ಯಾಕೆ ಬೇಕಿತ್ತು: ಗೃಹಸಚಿವ ಪರಮೇಶ್ವರ್

Krishnaveni K

ಶನಿವಾರ, 13 ಜುಲೈ 2024 (13:17 IST)
ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಎಸ್ ಐಟಿ ತನಿಖೆ ನಡೆಯುತ್ತಿದ್ದಾಗ ಇಡಿ ತನಿಖೆ ಅಗತ್ಯವಿರಲಿಲ್ಲ ಎಂದು ಗೃಹಸಚಿವ ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಎಸ್ಐಟಿ ಮಾಜಿ ಸಚಿವರನ್ನು ತನಿಖೆ ನಡೆಸಿತ್ತು ಎಂದಿದ್ದಾರೆ.

ಈಗಾಗಲೇ ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಎಸ್ ಐಟಿ ತಂಡ ಹಾಗೂ ಸಿಬಿಐ ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ವಾಲ್ಮೀಕಿ ನಿಗಮದ ಬಗ್ಗೆ ತನಿಖೆ ಮಾಡಲು ನಾವೇ ಎಸ್ ಐಟಿ ತಂಡ ರಚಿಸಿದ್ದೇವೆ. ಸಿಬಿಐ ಕೂಡಾ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಇಡಿ ಅಗತ್ಯವೇನಿತ್ತು ಎಂದು ಪರಮೇಶ್ವರ್ ಹೇಳಿದ್ದಾರೆ.

ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರರನ್ನು ಇಡಿ ಬಂಧಿಸಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಎಸ್ಐಟಿ ತನಿಖೆಯಾಗುತ್ತಿದ್ದಾಗ ಇಡಿ ಮಧ್ಯಪ್ರವೇಶಿಸುವುದು ಅನಗತ್ಯವಾಗಿತ್ತು ಎಂದಿದೆ. ಈಗಾಗಲೇ ಎಸ್ಐಟಿ ತಂಡ ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಅವರನ್ನು ವಿಚಾರಣೆಗೊಳಪಡಿಸಿತ್ತು. ಹೀಗಿರುವಾಗ ಇಡಿ ತನಿಖೆ ಅನವಶ್ಯಕವಾಗಿತ್ತು ಎಂದಿದ್ದಾರೆ.

ಇನ್ನು, ಬಂಧನ ಭೀತಿಯಿಂದ ಬಸನಗೌಡ ದದ್ದಲ್ ತಲೆಮರೆಸಿಕೊಂಡಿದ್ದಾರೆ ಎಂಬ ಆರೋಪಗಳನ್ನು ಅವರು ಅಲ್ಲಗಳೆದಿದ್ದಾರೆ. ಬಸನಗೌಡ ತಮ್ಮ ಕುಟುಂಬದ ನಡುವೇ ಓಡಾಡಿಕೊಂಡಿದ್ದಾರೆ. ಯಾರೂ ಓಡಿಹೋಗಿಲ್ಲ ಎಂದಿದ್ದಾರೆ. ಕೇಂದ್ರೀಯ ಏಜೆನ್ಸಿಗಳನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಕಾಂಗ್ರೆಸ್ ವಿರೋಧವಿದೆ. ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಅದರ ಸಂಬಂಧ ಬ್ಯಾಂಕ್ ಅವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಹೀಗಿರುವಾಗ ಇಡಿ ಅಗತ್ಯವಿರಲಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ