ಮಾಜಿ ಸಚಿವ ನಾಗೇಂದ್ರ ಬಂಧನಕ್ಕೆ ನನ್ನ ಅನುಮತಿ ಕೇಳಿಲ್ಲ: ಸ್ಪೀಕರ್ ಯುಟಿ ಖಾದರ್

Krishnaveni K

ಶನಿವಾರ, 13 ಜುಲೈ 2024 (12:33 IST)
ಬೆಂಗಳೂರು: ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ನಾಗೇಂದ್ರ ಬಂಧನಕ್ಕೆ ನನ್ನಅನುಮತಿ ಕೇಳಿಲ್ಲ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ. ನಿನ್ನೆಯಷ್ಟೇ ಜಾರಿ ನಿರ್ದೇಶನಾಲಯ (ಇಡಿ) ನಾಗೇಂದ್ರರನ್ನು ಬಂಧಿಸಿತ್ತು.

ವಾಲ್ಮೀಕಿ ನಿಗಮದಿಂದ ತಮ್ಮ ಆಪ್ತರ ಮೂಲಕ ಕೋಟ್ಯಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆ ಮಾಡಿರುವ ಕುರಿತು ಇಡಿ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ದಾಳಿ ನಡೆಸಿದ್ದಲ್ಲದೆ, ನಿನ್ನೆ ಅವರನ್ನು ವಶಕ್ಕೆ ಪಡೆದುಕೊಂಡಿತ್ತು. ಸತತ 7 ಗಂಟೆ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಇಂದು ಬೆಳಿಗ್ಗೆ ನಾಗೇಂದ್ರರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

ಈ ವೇಳೆ ನ್ಯಾಯಾಧೀಶರು ಅವರನ್ನು 6 ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿತ್ತು. ಇತ್ತ ನಾಗೇಂದ್ರ ಬಂಧನವಾಗುತ್ತಿದ್ದಂತೇ ಪ್ರತಿಕ್ರಿಯಿಸಿರುವ ಸ್ಪೀಕರ್ ಯುಟಿ ಖಾದರ್, ‘ಇಡಿ ಅಧಿಕಾರಿಗಳು ನಾಗೇಂದ್ರರನ್ನು ಬಂಧಿಸಿದ ಬಳಿಕ ನನಗೆ ಮಾಹಿತಿ ನೀಡಬೇಕು. ಸೋಮವಾರದಿಂದ ಮುಂಗಾರು ಅಧಿವೇಶನ ಆರಂಭವಾಗಲಿದೆ. ಒಂದು ವೇಳೆ ಅಧಿವೇಶನದ ಸಂದರ್ಭದಲ್ಲಿ ಬಂಧಿಸಿದ್ದರೆ ಅಧಿಕಾರಿಗಳು ನನ್ನ ಅನುಮತಿ ಕೇಳಲೇಬೇಕಿತ್ತು. ಆದರೆ ಈಗ ಬಂಧನದ ಬಳಿಕವಾದರೂ ನನಗೆ ಮಾಹಿತಿ ನೀಡಬೇಕು. ಆದರೆ ಇದುವರೆಗೆ ನನಗೆ ಅಧಿಕೃತ ಮಾಹಿತಿ ನೀಡಿಲ್ಲ’ ಎಂದು ಖಾದರ್ ಹೇಳಿದ್ದಾರೆ.

ಶಾಸಕರನ್ನು ಬಂಧಿಸುವಾಗ ಸ್ಪೀಕರ್ ಅನುಮತಿ ಬೇಕಾಗುತ್ತದೆ. ಆದರೆ ನಾಗೇಂದ್ರ ಬಂಧನದ ಸಂದರ್ಭದಲ್ಲಿ ಸದನ ನಡೆಯುತ್ತಿರಲಿಲ್ಲ. ಹೀಗಾಗಿ ಅಧಿಕೃತವಾಗಿ ಸ್ಪೀಕರ್ ಅನುಮತಿ ಪಡೆದಿರಲಿಲ್ಲ. ಆದರೆ ಬಂಧನದ ಬಳಿಕವೂ ಮಾಹಿತಿ ನೀಡಿಲ್ಲ ಎಂಬುದು ಸ್ಪೀಕರ್ ಖಾದರ್ ಆರೋಪವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ