ಐಸಿಯುನಿಂದ ಹೊರಹೋಗಿ ಎಂದಿದ್ದಕ್ಕೆ ವೈದ್ಯರ ಮೇಲೆ ಚಪ್ಪಲಿ ಎಸೆದ ರೋಗಿಯ ಸಂಬಂಧಿ

Sampriya

ಮಂಗಳವಾರ, 10 ಸೆಪ್ಟಂಬರ್ 2024 (16:14 IST)
Photo Courtesy X
ಚಿಕ್ಕಮಗಳೂರು: ಕರ್ತವ್ಯನಿರತ ವೈದ್ಯರ ಮೇಲೆ ಮಹಿಳೆಯೊಬ್ಬರು ಚಪ್ಪಳಿ ಎಸೆದ ಘಟನೆ ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಈ ಸಂಬಂಧ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಹೊರ ರೋಗಿ ವಿಭಾಗ ಬಂದ್ ಮಾಡಿ ಪ್ರತಿಭಟನೆ ಆರಂಭಿಸಿದ್ದಾರೆ.

ಘಟನೆ ಹಿನ್ನೆಲೆ: ಗಲಾಟೆಯೊಂದರಲ್ಲಿ ಗಾಯವಾಗಿ ಇರ್ಷಾದ್ ಎಂಬುವರು ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ತುರ್ತು ಚಿಕಿತ್ಸಾ ವಿಭಾಗದಲ್ಲಿದ್ದ ಮೂಳೆ ತಜ್ಞ ವೆಂಕಟೇಶ್ ಅವರು ತಪಾಸಣೆ ನಡೆಸುವಾಗ ಎಲ್ಲರೂ ಒಟ್ಟಿಗೇ ಒಳಗೆ ಬಂದಿದ್ದು, ಹೊರ ಹೋಗುವಂತೆ ವೈದ್ಯರು ತಿಳಿಸಿದಾಗ ಮಾತಿಗೆ ಮಾತು ಬೆಳೆದಿದೆ.

ಈ ಸಂದರ್ಭದಲ್ಲಿ ಕೋಪಗೊಂಡ ಗಾಯಾಳು ಸಂಬಂಧಿ ತಸ್ಲಿಮಾ ವೈದ್ಯರ ಕೊರಳ‌ ಪಟ್ಟಿ ಹಿಡಿದು ಎಳೆದಿದ್ದಾರೆ. ಅಲ್ಲದೆ ಚಪ್ಪಲಿ ಬಿಚ್ಚಿ ಎಸೆದಿದ್ದು, ಅಲ್ಲೇ ಇದ್ದ ಕೆಲವರು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್ ನಲ್ಲಿ ವಿಡಿಯೊ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೂಡಲೇ ಹೊರರೋಗಿ ವಿಭಾಗ ಬಂದ್ ಮಾಡಿದ ವೈದ್ಯರು ಮತ್ತು ಸಿಬ್ಬಂದಿ, ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿ ಎದುರು ಜಮಾಯಿಸಿದರು. ಇದೀಗ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ