ಹುಬ್ಬಳ್ಳಿ: ನೇಹಾ ಹಿರೇಮಠ್ ಹತ್ಯೆಯಾದ ಮಾದರಿಯಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಹತ್ಯೆ ಪ್ರಕರಣ ನಡೆದಿದೆ. ಯುವತಿಯನ್ನು ಚಾಕುವಿನಿಂದ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದಾನೆ.
ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ. ಅಂಜಲಿ ಅಂಬಿಗೇರ ಮೃತ ಯುವತಿ. ವಿಶ್ವ ಅಲಿಯಾಸ್ ಗಿರೀಶ್ ಎಂಬಾತ ಈಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಯುವತಿಯನ್ನು ಈತ ಪ್ರೀತಿಸುತ್ತಿದ್ದ ಮತ್ತು ತಾನು ಕರೆದಲ್ಲಿಗೆ ಬರಬೇಕು. ಇಲ್ಲದೇ ಹೋದರೆ ನೇಹಾ ಹಿರೇಮಠ್ ಗೆ ಆದ ಗತಿಯೇ ನಿನಗೂ ಆಗಲಿದೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಯುವತಿಗೆ ಬೆದರಿಕೆ ಹಾಕುತ್ತಿದ್ದ ಬಗ್ಗೆ ಆಕೆಯ ಅಜ್ಜಿ ಪೊಲೀಸರಿಗೆ ದೂರು ನೀಡಿದ್ದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಒಂದು ವೇಳೆ ಆಗಲೇ ಪೊಲೀಸರು ಯುವಕನ ಮೇಲೆ ಕ್ರಮ ಕೈಗೊಂಡಿದ್ದರೆ ಈ ದುರ್ಘಟನೆಯೇ ನಡೆಯುತ್ತಿರಲಿಲ್ಲ. ಒಂದು ರೀತಿಯಲ್ಲಿ ಈ ಹತ್ಯೆಗೆ ಪೊಲೀಸರ ನಿರ್ಲ್ಷ್ಯಕ್ಷವೂ ಕಾರಣ ಎನ್ನಬಹುದು.
ಬೆಳಗ್ಗಿನ ಜಾವ ಮನೆಗೇ ನುಗ್ಗಿದ ಆರೋಪಿ ಯುವತಿಯನ್ನು ಮನೆಯಿಡೀ ಅಟ್ಟಾಡಿಸಿ ಪದೇ ಪದೇ ಚಾಕುವಿನಿಂದ ಇರಿದಿದ್ದಾನೆ. ಮನೆಯವರು ತಡೆಯಲು ಯತ್ನಿಸಿದರೂ ಸಾಧ‍್ಯವಾಗಲಿಲ್ಲ. ಕೃತ್ಯ ನಡೆದ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಈತನ ವಿರುದ್ಧ ಇದಕ್ಕೆ ಮೊದಲು ಸಣ್ಣ ಪುಟ್ಟ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.