ಬೆಂಗಳೂರು : ರಾಜ್ಯ ವಿಧಾನಸಭೆ ಪ್ರತಿನಿಧಿಗಳಿಂದ ವಿಧಾನಪರಿಷತ್ನ ಖಾಲಿ ಇರುವ 3 ಸ್ಥಾನಗಳಿಗೆ ನಿಗದಿಯಾಗಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಪಕ್ಷದ 3 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರಗೊಂಡಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಎನ್.ಎಸ್ ಬೋಸರಾಜು ಮತ್ತು ತಿಪ್ಪಣ್ಣಪ್ಪ ಕಮಕನೂರು ಅವರು ನಾಮಪತ್ರ ಸಲ್ಲಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಡಾ.ಕೆ ಪದ್ಮರಾಜನ್ ಅವರ ನಾಮಪತ್ರ ಸೂಚಕರಿಲ್ಲದ ಕಾರಣ ತಿರಸ್ಕೃತಗೊಂಡಿದೆ ಎಂದು ವಿಧಾನಸಭಾ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಪರಿಷತ್ತಿನ ಮೂರು ಸ್ಥಾನಗಳ ಉಪಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇರುವ ಕಾರಣ ಮೂವರೂ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.