ಶೋಭಾ ಕರಂದ್ಲಾಜೆ ವಿರುದ್ಧ ಎಸ್ ಟಿ ಸೋಮಶೇಖರ್ ಹೇಳಿಕೆ ಬಿಜೆಪಿ ಗರಂ

Krishnaveni K

ಸೋಮವಾರ, 11 ನವೆಂಬರ್ 2024 (12:09 IST)
ಬೆಂಗಳೂರು: ಮಹಿಳೆಯರಿಗೆ ಕನಿಷ್ಠ ಗೌರವ ನೀಡಬೇಕು ಎಂಬ ಜ್ಞಾನ ಇಲ್ಲದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಏಕವಚನದಲ್ಲಿ ದಾಳಿ ನಡೆಸಿದ ಶಾಸಕ ಎಸ್. ಟಿ. ಸೋಮಶೇಖರ್ ವರ್ತನೆಗೆ ಬಿಜೆಪಿ ಮುಖಂಡರು ಕೆಂಡಮಂಡಲರಾಗಿದ್ದಾರೆ.

ನಮ್ಮ ಪಕ್ಷದಿಂದ ಗೆದ್ದು ನಮ್ಮ ಸರ್ಕಾರದಲ್ಲೇ ಸಚಿವರಾಗಿ ಈಗಲೂ ಬಿಜೆಪಿ ಶಾಸಕರಾಗಿದ್ದುಕೊಂಡೇ ನಮ್ಮ ಪಕ್ಷದ ಕೇಂದ್ರ ಸಚಿವರ ವಿರುದ್ಧ ಸೋಮಶೇಖರ್ ನೀಡಿರುವ ಹೇಳಿಕೆ ಇಡೀ ಮಹಿಳಾ ಸಮಾಜಕ್ಕೆ ಮಾಡಿದ ಅಪಮಾನ ಎಂದು ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ಮಾಜಿ ಉಪಮೇಯರ್ ಎಸ್. ಹರೀಶ್ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ನಮ್ಮ ಪಕ್ಷಕ್ಕೆ ಪಕ್ಷಾಂತರ ಮಾಡಿ ಸಚಿವರಾಗಿದ್ದ ಸೋಮಶೇಖರ್ ಅವರು ಕಾಂಗ್ರೆಸ್ ಪಕ್ಷದಿಂದ 10 ಬಾರಿ ಗೆದ್ದಿದ್ದರು ಅವರನ್ನು ಮಂತ್ರಿಯನ್ನಾಗಿ ಮಾಡುತ್ತಿರಲಿಲ್ಲ. ಅಂತಹ ವ್ಯಕ್ತಿಯನ್ನು ನಮ್ಮ ಪಕ್ಷ ಸಹಕಾರ ಸಚಿವರನ್ನಾಗಿ ಮಾಡಿತ್ತು. ತಮ್ಮ ರಾಜಕೀಯ ಏಳಿಗೆಗಾಗಿ ಸಹಕರಿಸಿದ ಪಕ್ಷದ ಬಗ್ಗೆ ಸೋಮಶೇಖರ್ ಕೃತಜ್ಞರಾಗಿರಬೇಕು ಆದರೆ ಅಂತಹ ದೊಡ್ಡ ಮನಸ್ಸು ಅವರಲ್ಲಿ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ.

ಪಕ್ಷಕ್ಕೆ ನಿಷ್ಠರಾಗದೆ ಇಲ್ಲದಿದ್ದರೂ ಪರವಾಗಿಲ್ಲ ಕನಿಷ್ಠ ಮಹಿಳೆಯರಿಗೆ ಗೌರವ ಕೊಡಬೇಕು ಎಂಬ ಜ್ಞಾನ ಇಲ್ಲದ ಸೋಮಶೇಖರ್ ಅವರು ಈ ಕೂಡಲೇ ಶೋಭಾ ಕರಂದ್ಲಾಜೆ ಅವರ ಕ್ಷಮೆ ಕೋರಬೇಕು ಎಂದು ಹರೀಶ್ ಆಗ್ರಹಿಸಿದ್ದಾರೆ.

ಒಂದು ಬಾರಿ ಶಾಸಕರಾಗಿ ಹಾಗೂ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಶೋಭಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರಕಾರದಲ್ಲಿ ಎರಡನೇ ಬಾರಿ ಕೇಂದ್ರ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಂತಹ ವ್ಯಕ್ತಿಯ ಬಗ್ಗೆ ಸೋಮಶೇಖರ್ ಅವರು ಏಕವಚನದಲ್ಲಿ ವಾಗ್ದಾಳಿ ನಡೆಸಿರುವುದನ್ನು ನೋಡಿದರೆ ಅವರ ವ್ಯಕ್ತಿತ್ವ ಎಂತಹದ್ದು ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಕಿಡಿ ಕಾರಿದ್ದಾರೆ.

ಶೋಭಾ ಅವರ ತಾಕತ್ತು ಹೇಳಿಕೆಗೆ ತಿರುಗೇಟು ನೀಡುವ ಸಂದರ್ಭದಲ್ಲಿ ಸೋಮಶೇಖರ್ ಅವರು ನನ್ನ ತಾಕತ್ ಬಗ್ಗೆ ಅವಳು ಟೆಸ್ಟ್ ಮಾಡಬೇಕು ಎನ್ನುವುದಾದರೆ ಯಶವಂತಪುರ ಕ್ಷೇತ್ರಕ್ಕೆ ಬರಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅವಳು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ನನ್ನ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧಿಸಲಿ ಆಗ ನನ್ನ ತಾಕತ್ತು ಏನೆಂದು ತೋರಿಸುತ್ತೇನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ