ನಾಡಿನ ಹಿರಿಯರು, ಸಂತರು, ಗುರುವರ್ಯರ ಬಗ್ಗೆ ಅಪಾರ ಗೌರವ ಹೊಂದಿರುವ ಕನ್ನಡದ ಸ್ವಾಭಿಮಾನಿ, ಐಪಿಎಸ್ ಅಧಿಕಾರಿ ಹಾಗೂ ರೈಲ್ವೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಭಾಸ್ಕರ್ ರಾವ್ ಕನ್ನಡ ಜನರ ಹೆಗ್ಗಳಿಕೆಗೆ ಪಾತ್ರರಾದವರು.
ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಭ್ರಷ್ಟಾಚಾರ, ಶಿಷ್ಟಾಚಾರ ಮತ್ತು ಶಿಸ್ತಿನ ಬದಲಾವಣೆ, ಸಿಬ್ಬಂದಿಯ ಸಮಯ ಪ್ರಜ್ಞೆ ಜಾರಿ ಮಾಡುವಲ್ಲಿ ಭಾಸ್ಕರ್ ರಾವ್ ಅವರು ಕನ್ನಡಿಗರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದವರು. ಇಂತಹ ವ್ಯಕ್ತಿತ್ವದ ಅಧಿಕಾರಿಯ ಮನಸ್ಸಿಗೆ ಘಾಸಿಯಾಗಿ ರಾಜೀನಾಮೆ ಸಲ್ಲಿಸುವ ಮಟ್ಟಕ್ಕೆ ಅವರ ಬಳಿ ಯಾರು ವರ್ತಿಸಿದರೋ ತಿಳಿಯದು. ಆದ್ದರಿಂದ ಮುಖ್ಯಮಂತ್ರಿಗಳು ತಾವೇ ಖುದ್ದು ಭಾಸ್ಕರ್ ರಾವ್ ಅವರನ್ನು ಕರೆದು ಅವರಿಗೆ ಆದ ಅನ್ಯಾಯ ಸರಿಪಡಿಸಿ ಇಲಾಖೆಯಲ್ಲಿಯೇ ಮುಂದುವರೆಯುವಂತೆ ನೋಡಿಕೊಳ್ಳಬೇಕೆಂದು ಕರ್ನಾಟಕ ಗಡಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಪ್ರೊ.ಬಿ.ಕೆ.ರಾ.ರಾವ್ಬೈಂದೂರ್ ಹಾಗೂ ಪದಾಧಿಕಾರಿಗಳು ಕೋರಿದ್ದಾರೆ.
ಕಾನೂನು ರೀತಿಯಲ್ಲಿ ಮುಂದಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಬೇಕಾಗಿರುವ ಭಾಸ್ಕರ್ ರಾವ್ ಅವರನ್ನು ಕಾನೂನಾತ್ಮಕವಾಗಿ ಮಹಾ ನಿರ್ದೇಶಕರನ್ನಾಗಿಯೇ ನೇಮಿಸಿಕೊಳ್ಳಬೇಕೆಂದು, ಪರಭಾಷೆ ಅಧಿಕಾರಿಗೆ, ಪ್ರಭಾವಕ್ಕೆ ಮಣೆ ಹಾಕುವ ಯಾವುದೇ ಪ್ರಕ್ರಿಯೆ ನಡೆದರೆ ಕರ್ನಾಟಕ ಗಡಿ ಹೋರಾಟ ಸಮಿತಿ ತಮ್ಮ ಮನೆ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಅನಿವಾರ್ಯವಾಗಿ ಕೈಗೊಳ್ಳಬೇಕಾದೀತು ಎಂದು ಅವರು ಮುಖ್ಯಮಂತ್ರಿಗಳಿಗೆ ವಾಟ್ಸಾಪ್ ಮೂಲಕ ತಿಳಿಸಿದ್ದಾರೆ.