ಅಡುಗೆ ಎಣ್ಣೆ, ಕುಡಿಯುವ ಎರಡೂ ಏರಿಕೆ ಮಾಡಿದಾರೆ: ಸಿಟಿ ರವಿ

Sampriya

ಗುರುವಾರ, 10 ಏಪ್ರಿಲ್ 2025 (22:19 IST)
ಚಿಕ್ಕಮಗಳೂರು: ರಾಜ್ಯದ 60 ಪರ್ಸೆಂಟ್ ಸರಕಾರ ಯಾರದು? 420 ಸರಕಾರ ಯಾರದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿ, ಸಿದ್ದರಾಮಯ್ಯರದು ಎಂದು ಜನರಿಂದ ಉತ್ತರ ಪಡೆದರು.

ಬಿಜೆಪಿ ಜನಾಕ್ರೋಶ ಯಾತ್ರೆಯ ಸಂಬಂಧ ಇಂದು ಇಲ್ಲಿ ಏರ್ಪಡಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಇದು ಹಲಾಲ್ ಕಟ್ ಸರಕಾರ ಎಂದು ಟೀಕಿಸಿದರು. ಮೈಸೂರು ಮಹಾರಾಜರು ಹತ್ತಾರು ಅಭಿವೃದ್ಧಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದರೆ, ಕಾಂಗ್ರೆಸ್ ಸರಕಾರವು ತನ್ನನ್ನು ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ ಸೇರಿ ಹತ್ತಾರು ಹಗರಣಗಳ ಮೂಲಕ ಗುರುತಿಸಿಕೊಂಡಿದೆ ಎಂದು ಆರೋಪಿಸಿದರು. ಇದು ಹಲಾಲ್‍ಕೋರರ ಸರಕಾರ, ಭ್ರಷ್ಟ ಸರಕಾರ, ಬೆಲೆ ಏರಿಸಿದ ಸರಕಾರ ಎಂದು ಜನರು ಕೂಗಿದರು.

ಇದು ಭ್ರಷ್ಟಾಚಾರದಲ್ಲಿ ನಂಬರ್ ಒನ್ ರಾಜ್ಯ ಎಂದು ಕಾಂಗ್ರೆಸ್ಸಿನ ರಾಜಣ್ಣ, ಬಸವರಾಜ ರಾಯರೆಡ್ಡಿ ಹೇಳಿದ್ದನ್ನು ನೆನಪಿಸಿದರು. ಕಾಂಗ್ರೆಸ್ ಎಂದರೆ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯ ಸರಕಾರ ಎಂದು ಆಕ್ಷೇಪಿಸಿದರು.

ಬಸ್ ದರ, ವಿದ್ಯುತ್ ದರ, ಹಾಲಿನ ದರ, ನೀರಿನ ದರ, ಕಸದ ದರ, ಡೀಸೆಲ್- ಪೆಟ್ರೋಲ್, ಮೆಟ್ರೋ ದರ ಏರಿಸಿದ ಸರಕಾರ ಎಂದು ಟೀಕಿಸಿದರು. ಅಡುಗೆ ಎಣ್ಣೆ ಬೆಲೆ, ಕುಡಿಯುವ ಎಣ್ಣೆಯ ಬೆಲೆಯನ್ನೂ ಏರಿಸಿದ ಸರಕಾರ ಇದು ಎಂದು ಟೀಕಿಸಿದರು. ಅತ್ಯಾಚಾರ, ಲಂಚಾವತಾರದಲ್ಲೂ ಈ ಸರಕಾರ ಕುಪ್ರಸಿದ್ಧವಾಗಿದೆ ಎಂದು ದೂರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ