ಬೆಂಗಳೂರು: ಹೊರಗುತ್ತಿಗೆ ನೇಮಕಾತಿ ವಿಚಾರದಲ್ಲಿ ದಲಿತರಿಗೆ ವಂಚನೆ ಮಾಡುವ ಮೀಸಲಾತಿಯನ್ನು ರಾಜ್ಯದ ಕಾಂಗ್ರೆಸ್ ಸರಕಾರ ಅಂಗೀಕರಿಸಿದೆ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ವರ್ಗಗಳು ಮತ್ತು ಮಹಿಳಾ ಮೀಸಲಾತಿಗೆ ಅನುಗುಣವಾಗಿ ರಾಜ್ಯ ಸರಕಾರವು ಗುತ್ತಿಗೆ ಆಧಾರದಲ್ಲಿ ನೇಮಕಾತಿಯಲ್ಲಿ ಮಾಡುವುದರಲ್ಲೂ ಕೂಡ ಮೀಸಲಾತಿ ನೀಡಿರುವುದಾಗಿ ತಿಳಿಸಿದ್ದು ಸ್ವಾಗತಾರ್ಹ. 2022-23ರಲ್ಲಿ ನಮ್ಮ ಸರಕಾರ ಇದ್ದಾಗ ಬಸವರಾಜ ಬೊಮ್ಮಾಯಿಯವರು ಈ ಕುರಿತು ತೀರ್ಮಾನ ಮಾಡಿದ್ದರು. ಈ ಕುರಿತು ಪರಿಶಿಷ್ಟ ಜಾತಿ, ವರ್ಗದವರು ಬಹುದಿನಗಳ ಕಾಲ ಹೋರಾಟ ಮಾಡಿದ್ದರು. ಮೇಲ್ಮನೆಯಲ್ಲಿ ನಾನು ಈ ಕುರಿತು ಪ್ರಶ್ನಿಸಿದ್ದೆ. ಹೊರಗುತ್ತಿಗೆ ನೀಡುವಾಗ ಪರಿಶಿಷ್ಟ ಜಾತಿ, ವರ್ಗಗಳಿಗೆ ಅನ್ಯಾಯ ಆಗುತ್ತಿದೆ. ಅದರಲ್ಲೂ ಮೀಸಲಾತಿ ಕೊಡಲು ಕೇಳಿದ್ದೆ. ಆಗಲೇ ಸರಕಾರ ಒಪ್ಪಿಗೆ ಕೊಟ್ಟಿತ್ತು ಎಂದು ನೆನಪಿಸಿದರು.
ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷ ಕಳೆದರೂ, ನಾವು ಒತ್ತಡ ಹೇರಿದ್ದರೂ ಅದನ್ನು ಜಾರಿ ಮಾಡಿರಲಿಲ್ಲ. ಕೊನೆಗೂ ಒಂದು ತೀರ್ಮಾನ ತೆಗೆದುಕೊಂಡಿದ್ದಾರೆ. ತೀರ್ಮಾನ ಮಾಡುವಾಗಲೂ ತಾರತಮ್ಯ ಮಾಡಿದ್ದಾರೆ. ಕಾಂಗ್ರೆಸ್ ನಿರಂತರವಾಗಿ ದಲಿತ ವಿರೋಧಿ ಚಟುವಟಿಕೆ, ಸಂಸ್ಕøತಿಯನ್ನು ಮಾಡುತ್ತ ಬಂದಿದೆ. ಯಾವುದೇ ಇಲಾಖೆಯಲ್ಲಿ 20 ನೇಮಕಾತಿ ನಡೆದರೆ ಮೀಸಲಾತಿ ಇಲ್ಲ; ಅದಕ್ಕಿಂತ ಹೆಚ್ಚು ಬಂದರೆ ಮಾತ್ರ ಮೀಸಲಾತಿ ಎಂದಿದ್ದಾರೆ. ಇದು ದಲಿತರು, ಮಹಿಳೆಯರಿಗೆ ಮಾಡುವ ಮೋಸ ಅಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಈ ಉಪ ನಿಯಮವನ್ನು ಯಾಕೆ ಇಟ್ಟಿದ್ದೀರಿ? ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವುದು ಕಾಂಗ್ರೆಸ್ ಸಂಸ್ಕøತಿ ಎಂದು ಟೀಕಿಸಿದರು.
ಹಿಂದೆ ಗುತ್ತಿಗೆ ಕೊಡುವಾಗಲೂ ದಲಿತರಿಗೆ 25 ಲಕ್ಷ ಇದ್ದರೆ ಕೊಡಬೇಕೆಂದು ನಿಯಮ ಇತ್ತು. ಕಾಂಟ್ರಾಕ್ಟ್ ಬೇರೆಯವರಿಗೆ ಕೊಡಲು 4-5 ಪ್ಯಾಕೇಜ್‍ಗಳನ್ನು ಸೇರಿಸಿ ಒಂದು ಕೋಟಿ ಮೀರುವಂತೆ ಮಾಡಿ ಗುತ್ತಿಗೆ ಬೇರೆಯವರಿಗೆ ಕೊಡುತ್ತಿದ್ದರು. ದಲಿತರನ್ನು ವಂಚಿಸಲು ಹೀಗೆ ಮಾಡಲಾಗುತ್ತಿತ್ತು ಎಂದು ವಿವರಿಸಿದರು.
ದಲಿತರಿಗೆ ಮೋಸ- ಸಿಎಂ ಉತ್ತರಕ್ಕೆ ಆಗ್ರಹ
ಹಿಂದೆ ದಲಿತರಿಗೆ ಮೀಸಲಿಟ್ಟ 25 ಸಾವಿರ ಕೋಟಿ ರೂಪಾಯಿ ಹಣವನ್ನು ನೀವು ಬೇರೆ ವಿಚಾರಕ್ಕೆ ಬಳಸಿದ್ದೀರಿ ಎಂದು ಟೀಕಿಸಿದ ಅವರು, ಗ್ಯಾರಂಟಿಗಳಿಗೆ 56 ಸಾವಿರ ಕೋಟಿಯನ್ನು ಒಂದು ವರ್ಷದಲ್ಲಿ ಕೊಟ್ಟಿದ್ದಾಗಿ ಮುಖ್ಯಮಂತ್ರಿಯವರು ತಮ್ಮ ಸರಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ತಿಳಿಸಿದ್ದಾರೆ. ಗ್ಯಾರಂಟಿಗಳಿಗೆ ನೀವು ಖಜಾನೆಯಿಂದ ಹಣ ಕೊಟ್ಟಿಲ್ಲ; 25 ಸಾವಿರ ಕೋಟಿ ಮೊತ್ತವನ್ನು ನೀವು ನುಂಗಿದ್ದೀರಲ್ಲವೇ? ಆ ಮೂಲಕ ದಲಿತರಿಗೆ ಮೋಸ ಮಾಡಿದ್ದೀರಲ್ಲವೇ? ಈ ವಿಚಾರಕ್ಕೆ ಮಾನ್ಯ ಮುಖ್ಯಮಂತ್ರಿಯವರು ಉತ್ತರಿಸಲಿ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
ಮಾನ್ಯ ಪ್ರಿಯಾಂಕ್ ಖರ್ಗೆಯವರು ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವರು. ಅಲ್ಲಿ ಓಲೈಕೆ ರಾಜಕಾರಣ ಯಥೇಚ್ಛವಾಗಿ ನಡೆಯುತ್ತಿದೆ. ಮಾತು ಮಾತಿಗೂ ಎಲ್ಲರಿಗೂ ಸವಾಲೆಸೆಯುವ ಸಚಿವರಿದ್ದು, ಅವರ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿಲ್ಲವೇ? ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದಿಂದ 44 ವರ್ಷದ ದಲಿತ ಹುಡುಗ ಆನಂದ ಎಂಬುವರು ಸೆಂಟ್ರಲ್ ಯೂನಿವರ್ಸಿಟಿಗೆ ಪಿಎಚ್‍ಡಿ ಮಾಡಲು ಹೋಗಿದ್ದರು. ಅವರು ಕೊಲೆಯಾಗಿ ಪೆಟ್ರೋಲ್ ಬಂಕ್ ಬಳಿ ಬಿದ್ದಿದ್ದರು. ಇದನ್ನು ಮುಚ್ಚಿಡಲಾಗುತ್ತಿದೆ. ಸಂಪೂರ್ಣ ಜಿಲ್ಲೆಯನ್ನೇ ನಿಯಂತ್ರಿಸುವ ಸಚಿವರಿಗೆ ಇದರ ಬಗ್ಗೆ ತನಿಖೆ ಮಾಡಬೇಕೆಂದು ಗೊತ್ತಿಲ್ಲವೇ ಎಂದು ಎಂದು ಕೇಳಿದರು. ದಲಿತರ ಬಗ್ಗೆ ಭಾಷಣ ಮಾಡುವ ನಿಮಗೆ, ನಿಮ್ಮ ಮೂಗಿನ ಕೆಳಗಿನ ಆದ ಘಟನೆ ಗೊತ್ತಿಲ್ಲವೇ ಎಂದು ಪ್ರಶ್ನೆ ಮುಂದಿಟ್ಟರು.
ಇವತ್ತು ಅವರ ತಂದೆ ಇಲ್ಲ. ತಾಯಿ, ತಂಗಿಯನ್ನು ಸಾಕಬೇಕಾದ ವ್ಯಕ್ತಿ ಮರ್ಡರ್ ಆಗಿ ಬಿದ್ದಿದ್ದಾರೆ. ಕಾರಣ ಏನು? ಅವರು ವ್ಯಾಪಾರಕ್ಕೆ ಹೋದವರಲ್ಲ. ಯಾಕೆ ಹೀಗಾಗಿದೆ. ಈ ಸಚಿವರು ಸರಿಯಾಗಿ ಕೆಲಸ ಮಾಡಿದ್ದರೆ ಇಂಥವೆಲ್ಲ ನಡೆಯುತ್ತಿರಲಿಲ್ಲ. ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು. ಅಲ್ಲದೆ ಜಿಲ್ಲೆಯಿಂದ ಹೊರಗೆ ಹಾಕಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ಇದಕ್ಕೆ ಉತ್ತರ ಕೊಡಬೇಕು. ಕಾರಣ ತಿಳಿಯಬೇಕು ಎಂದರು. ಯಾದಗಿರಿಯಲ್ಲಿ ಆದ ಇನ್ನೊಂದು ಕೊಲೆ ಮುಚ್ಚಿ ಹೋಗಿದೆ. ಹೊರಗಡೆಯೇ ಬರುತ್ತಿಲ್ಲ. ಹೋರಾಟ ಮಾಡಿದರೂ ಅದು ಹೊರಗಡೆ ಬರುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾರು ಖರೀದಿಗೆ ಹೋದ ಮೂವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಹಿಂಸಿಸಿ ಮರ್ಮಾಂಗಕ್ಕೆ ಶಾಕ್ ಕೊಟ್ಟು 10 ಲಕ್ಷಕ್ಕಾಗಿ ಪೀಡಿಸಿದ್ದಾರೆ. ಇದರ ವಿಡಿಯೋ ಹರಿದಾಡುತ್ತಿದೆ. ಮುಸ್ಲಿಂ ಬಾಂಧವರ ಯುವಕರು ಇದನ್ನು ಮಾಡಿದ್ದಾರೆ. ಇದೂ ಗುಲ್ಬರ್ಗದಲ್ಲೇ ನಡೆದಿದೆ. ಇಂಥವೆಲ್ಲ ನಡೆಯುವುದಾದರೆ ನೀವೇನು ಕೈಕಟ್ಟಿ ಕುಳಿತಿದ್ದೀರಾ ಮುಖ್ಯಮಂತ್ರಿಗಳೇ? ಜಿಲ್ಲಾ ಸಚಿವರೇ? ಯಾವ ಕಾರಣಕ್ಕೆ ಹೀಗಾಗುತ್ತಿದೆ? ಹಾಗಿದ್ದ ಮೇಲೆ ನಿಮ್ಮ ಸರಕಾರ ಬದುಕಿದೆಯಾ? ಎಂದು ಕೇಳಿದರು.
ನಿಮಗೆ ಇದನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಿದ್ದರೆ ಇರಿ. ಇಲ್ಲವಾದರೆ ತೊಲಗಿ ಹೋಗಿ ಎಂದು ಎಲ್ಲ ಕಡೆಯಲ್ಲಿ ಜನರು ತುಚ್ಛವಾಗಿ ಮಾತನಾಡುತ್ತಿದ್ದಾರೆ. ಇವೆಲ್ಲ ನಿಮ್ಮ ಗಮನಕ್ಕೆ ಬಂದಿಲ್ಲವೇ? ನಿಮ್ಮ ಇಂಟೆಲಿಜೆನ್ಸ್ ಇಲ್ಲವೇ? ಎಂದರಲ್ಲದೆ, ಜನರ ಸಂಕಷ್ಟಕ್ಕೆ ಸ್ಪಂದಿಸಲು ಒತ್ತಾಯಿಸಿದರು.