ಬೆಂಗಳೂರು: ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು ಇದನ್ನೇ ಬಂಡವಾಳವಾಗಿಟ್ಟುಕೊಂಡು ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿ ಮಾಡುವ ಕಿಡಿಗೇಡಿಗಳಿಗೆ ನಗರ ಪೊಲೀಸ್ ಕಮಿಷನರ್ ಬಿ ದಯಾನಂದ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ ವಿರೋಧಿಸಿ ನಾಳೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆನೀಡಿವೆ. ಆದರೆ ಬಂದ್ ನೆಪದಲ್ಲಿ ಕೆಲವರು ಕಲ್ಲು ತೂರಾಟ ನಡೆಸಿ ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿ ಮಾಡುತ್ತಾರೆ. ಒಂದು ವೇಳೆ ಈ ರೀತಿ ಏನಾದರೂ ಮಾಡಿದಲ್ಲಿ ಅವರೇ ನಷ್ಟ ಭರಿಸಿಕೊಡಬೇಕಾಗುತ್ತದೆ ಎಂದು ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
ಇನ್ನು, ಬಂದ್ ಗೆ ಬೆಂಬಲ ಸೂಚಿಸಿದ್ದ ಖಾಸಗಿ ಬಸ್ ಗಳ ಒಕ್ಕೂಟ ಬಸ್ ಸಂಚಾರವಿರಲ್ಲ ಎಂದಿತ್ತು. ಆದರೆ ಈಗ ಕಮಿಷನರ್ ಎಚ್ಚರಿಕೆ ನೀಡಿದ್ದು ಸಾರಿಗೆ ಸಂಘಟನೆಗಳಿಗೆ ಪತ್ರ ಬರೆದು ಬಸ್ ಸಂಚಾರ ಸ್ಥಗಿತಗೊಳಿಸದೇ ಇರಲು ಸೂಚಿಸಿದ್ದಾರೆ.
ಹೀಗಾಗಿ ನಾಳೆ ಖಾಸಗಿ ಬಸ್ ಸಂಚರಿಸಲಿದೆ. ನಾವು ನೈತಿಕ ಬೆಂಬಲ ನೀಡಲಿದ್ದೇವೆ. ಆದರೆ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಬಸ್ ಓಡಾಟವಿರಲಿದೆ ಎಂದಿದ್ದಾರೆ.