ಡಿಸಿ, ಸಿಇಓ ಹಳ್ಳಿ ಪ್ರವಾಸ ಮಾಡೋದು ಕಡ್ಡಾಯ ಎಂದ ಸಚಿವ

ಬುಧವಾರ, 3 ಜುಲೈ 2019 (20:00 IST)
ಬಡ, ಕೂಲಿ ಕಾರ್ಮಿಕರ ಮತ್ತು ರೈತಾಪಿ ವರ್ಗದವರ ನೋವು ನಲಿವುಗಳನ್ನು ಆಲಿಸಲು ಮತ್ತು ಗ್ರಾಮೀಣ ಹಂತದಲ್ಲಿ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಟಾನವಾಗುತ್ತಿದಿಯೇ ಎಂಬುದನ್ನು ಅರಿಯಲು ಹಿರಿಯ ಅಧಿಕಾರಿಗಳು ಹಳ್ಳಿ ಪ್ರವಾಸ ಮಾಡೋದು ಕಡ್ಡಾಯ ಅಂತ ಸಚಿವ ಹೇಳಿದ್ದಾರೆ.

ಪ್ರಾದೇಶಿಕ ಆಯುಕ್ತರು,  ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ.ಗಳು ಕಡ್ಡಾಯವಾಗಿ ಹಳ್ಳಿ ಪ್ರವಾಸ ಮಾಡಬೇಕು ಅಂತ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೂಚನೆ ನೀಡಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬರ ಕಾಮಗಾರಿಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವ ದೇಶಪಾಂಡೆ, ಕಂದಾಯ ಇಲಾಖೆ ಮಾತೃ ಇಲಾಖೆಯಿದ್ದಂತೆ. ವೃದ್ಧಾಪ್ಯ, ವಿಧವಾ, ವಿಕಲಚೇತನ ವೇತನ, ಜಾತಿ-ಆದಾಯ ಪತ್ರ, ಪಹಣಿ, ಮುಟೇಷನ್, ಜಮೀನು ಪರಿವರ್ತನೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಜನರು ಕಚೇರಿಗೆ ಬರುತ್ತಾರೆ. ವಿನಾಕಾರಣ ಸಾರ್ವಜನಿಕರನ್ನು ಅಲೆದಾಡಿಸದೇ ನಿಗದಿತ ಸಮಯದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಇದಕ್ಕಾಗಿ ಅಧಿಕಾರಿಗಳು ತುಂಬಾ ಕ್ರಿಯಾಶೀಲತೆಯಿಂದ ಇಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ ಅಂತಾ ಹೇಳಿದ್ರು.

ಬರ ಕಾಮಗಾರಿ ನಿರ್ವಹಣೆಗಾಗಿ ಜಿಲ್ಲೆಗೆ ಈಗಾಗಲೇ ಟಾಸ್ಕ್ ಫೋರ್ಸ್‍ನಡಿ ಪ್ರತಿ ತಾಲೂಕಿಗೆ 1.25 ಕೋಟಿ ರೂ.ಗಳಂತೆ ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಇನ್ನು 12 ಕೋಟಿ ರು. ಅನುದಾನ ಲಭ್ಯವಿದೆ. ಅನುದಾನ ಬಳಸಿಕೊಂಡು ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತು ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳಬೇಕು.

ಪ್ರತಿ ತಹಶೀಲ್ದಾರ ಖಾತೆಯಲ್ಲಿ ಕನಿಷ್ಠ 40 ಲಕ್ಷ ರೂ. ಅನುದಾನ ಅನುದಾನ ಇರುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರು ಸರಬರಾಜು ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ