ಕಾಲು ತೊಳೆಯಲು ಹೋದ ಭಕ್ತ ನೀರು ಪಾಲು!

ಶನಿವಾರ, 15 ಅಕ್ಟೋಬರ್ 2022 (20:44 IST)
ತಿರುಪತಿಯ ತಿರುಮಲ ಪಾದಯಾತ್ರೆಗೆ ಹೊರಟ ಭಕ್ತರೊಬ್ಬರು ಶೌಚಕ್ಕೆ ಹೋಗಿ ಕಾಲು ತೊಳೆಯಲು ಕೃಷಿ ಹೊಂಡಕ್ಕೆ ಹೋದ ವ್ಯಕ್ತಿ ಕಾಲು ಜಾರಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಶೀಗೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
 
 ಶಿಡ್ಲಘಟ್ಟ ತಾಲೂಕು ಹೊರವಲಯದ ಕೈವಾರ ಹೋಬಳಿ ಜಂಗಮಶೀಗೆಹಳ್ಳಿ ಗ್ರಾಮದ ಬಳಿ ಕೃಷಿಹೊಂಡಕ್ಕೆ ಇಳಿದ ಭಕ್ತರೊಬ್ಬರು ಅಕಸ್ಮಿಕವಾಗಿ ಕಾಲು ಜಾರಿಬಿದ್ದು ಕೃಷಿ ಹೊಂಡದ ಪಾಲಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.ಮೃತ ವ್ಯಕ್ತಿಯನ್ನು ಮಂಡ್ಯ ತಾಲ್ಲೂಕು ಗೌಡನಗೆರೆ ಗ್ರಾಮದ ಚಿಲ್ಲರೆ ಅಂಗಡಿ ವ್ಯಾಪಾರಿ ೪೬ವರ್ಷದ ಶಂಕರ್ ಎಂದು ಗುರುತಿಸಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಮಂಡ್ಯ, ಕುಣಿಗಲ್ ಮತ್ತಿತರ ಕಡೆಯಿಂದ ಸುಮಾರು ೨೫೦೦ಕ್ಕೂ ಹೆಚ್ಚು ಭಕ್ತರು ತಿರುಪತಿ ತಿರುಮಲ ಪಾದಯಾತ್ರೆ ಕೈಗೊಂಡಿದ್ದು ಆ ಪಾದಯಾತ್ರೆಯಲ್ಲಿ ಶಂಕರ್ ಸಹ ಭಾಗವಹಿಸಿದ್ದರು.
 
ಸುಮಾರು ೫-೩೦ರ ಸಮಯದಲ್ಲಿ ಮೂರು ಮಂದಿ ಸ್ನೇಹಿತರ ಜೊತೆ ಶೌಚಕ್ಕೆ ಹೋದ ಶಂಕರ್ ಕಾಲು ತೊಳೆದುಕೊಳ್ಳಲು ಕೃಷಿಹೊಂಡಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ನೀರಿನೊಳಕ್ಕೆ ಬಿದ್ದ ಶಬ್ದ ಕೇಳಿಸಿಕೊಂಡು ಜೊತೆಯಲ್ಲಿದ್ದ ಸ್ನೇಹಿತರು ಓಡಿ ಬಂದಿದ್ದಾರೆ ಕತ್ತಲಿನಲ್ಲಿ ಹೊಂಡ ಸರಿಯಾಗಿ ಕಾಣದ ಪರಿಣಾಮ ಕೂಗಿಕೊಂಡಿದ್ದಾರೆ.ಕೃಷಿ ಹೊಂಡದ  ಸ್ವಲ್ಪ ದೂರದಲ್ಲಿರುವ ಗ್ರಾಮಸ್ಥರು ಬರುವ ವೇಳೆಗೆ ಆತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ