ಮಹದಾಯಿ ಹೋರಾಟಗಾರರು ಸಿಎಂ ಕುಮಾರಸ್ವಾಮಿ ಖಾತೆಗೆ ಹಣ ಜಮಾ ಮಾಡಿದ್ಯಾಕೆ?
ಗುರುವಾರ, 7 ಮಾರ್ಚ್ 2019 (07:19 IST)
ಹುಬ್ಬಳ್ಳಿ : ಮಹದಾಯಿ ನದಿ ನೀರು ವಿಚಾರವಾಗಿ ಮಹದಾಯಿ ಹೋರಾಟಗಾರರು ಸಂಸದರು ಹಾಗೂ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಪರಿಹಾರ ನಿಧಿಗೆ ಹಣವನ್ನು ಜಮಾ ಮಾಡಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರು ಬಜೆಟ್ ನಲ್ಲಿ ಒಂದೇ ಒಂದು ರೂ. ನೀಡದೇ ಮಹದಾಯಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಸಮಾಧಾನಗೊಂಡ ಹೋರಾಟಗಾರರು ಸರ್ಕಾರದ ಬೊಕ್ಕಸದಲ್ಲಿ ಹಣದ ಕೊರತೆ ಇರಬಹುದೆಂದು ಉತ್ತರ ಕರ್ನಾಟಕ ಭಾಗದ ನಾಲ್ವರು ಸಂಸದರ ಬ್ಯಾಂಕ್ ಖಾತೆಗೆ ತಲಾ ಐದು ಸಾವಿರ ರೂ. ಹಾಗೂ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಪರಿಹಾರ ನಿಧಿಗೆ 10 ಸಾವಿರ ರೂ. ವನ್ನು ಜಮಾ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹದಾಯಿ ಹೋರಾಟದ ನೇತೃತ್ವ ವಹಿಸಿರುವ ರೈತಾ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವಿರೇಶ್ ಸೋಬರದಮಠ ಅವರು, ‘ಮಹದಾಯಿ ಯೋಜನೆಗೆ 2 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಬೇಕು ಎಂದು ಸಿಎಂ ಕುಮಾರಸ್ವಾಮಿ ಅವರನ್ನು ಎರಡ್ಮೂರು ಬಾರಿ ಭೇಟಿ ನೀಡಿ ಒತ್ತಾಯಿಸಿದ್ದೆವು. ಆದರೆ, ಬಜೆಟ್ ನಲ್ಲಿ ಒಂದೇ ಒಂದು ರೂ. ನೀಡದೇ ಅವರೂ ಮಹದಾಯಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ.ಗದಗ, ಧಾರವಾಡ, ಬೆಳಗಾವಿ ಹಾಗೂ ಹಾವೇರಿ ಸಂಸದರಿಗೆ ರೈತರ ಹಾಗೂ ಜನಕ್ಕೆ ಅಗತ್ಯವಿರುವ ಕುಡಿಯುವ ನೀರಿನ ಕೆಲಸ ಮಾಡಲು ಹಣದ ಕೊರತೆ ಇರಬಹುದು ಅದಕ್ಕಾಗಿ ಅವರ ಖಾತೆಗೆ ಸ್ವಲ್ಪ ಮಟ್ಟಿನ ಹಣ ಜಮೆ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.