ಬೆಳಗಾವಿ: ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಬಿಮ್ಸ್) ಸ್ನಾತಕೋತ್ತರ ವಿದ್ಯಾರ್ಥಿನಿ ಸೋಮವಾರ ರಾತ್ರಿ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮೃತರನ್ನು ಬೆಂಗಳೂರು ಮೂಲದ ಡಾ.ಪ್ರಿಯಾ ಕಾರ್ತಿಕ್ (27) ಎಂದು ಗುರುತಿಸಲಾಗಿದ್ದು, ಅವರು ಬೆಳಗಾವಿಯ ಬಿಮ್ಸ್‌ನಲ್ಲಿ ಮನೋವೈದ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು.
ಸೋಮವಾರ ಸಂಜೆ 6.30ರ ಸುಮಾರಿಗೆ ವಿದ್ಯಾರ್ಥಿನಿ ತನ್ನ ಆಸ್ಪತ್ರೆಯ ಕರ್ತವ್ಯ ಮುಗಿಸಿ ತನ್ನ ಹಾಸ್ಟೆಲ್ ಕೊಠಡಿಗೆ ಮರಳಿದ್ದಾಳೆ ಎಂದು ಬಿಮ್ಸ್ ನಿರ್ದೇಶಕ ಡಾ.ಅಶೋಕ್ ಶೆಟ್ಟಿ ತಿಳಿಸಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ಆಕೆ ಶವವಾಗಿ ಪತ್ತೆಯಾಗಿದ್ದು, ಮಿತಿಮೀರಿದ ಔಷಧ ಸೇವಿಸಿರುವ ಶಂಕೆ ವ್ಯಕ್ತವಾಗಿದೆ.
ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಆಕೆಯ ಸಾವಿಗೆ ನಿಖರ ಕಾರಣ ಖಚಿತವಾಗಲಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ವಿದ್ಯಾರ್ಥಿನಿ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.