ನಮಗೆ ಬಿಬಿಎಂಪಿ ಬೇಡ ಎಂದ ಬೆಂಗಳೂರಿನ ಐ. ಟಿ.ಬಿ .ಟಿ. ಕಂಪನಿಗಳು

ಬುಧವಾರ, 14 ಸೆಪ್ಟಂಬರ್ 2022 (15:06 IST)
ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡು ಭಾರೀ ಪ್ರಮಾಣದ ಹಾನಿಯಾಗಿತ್ತು. ನೂರಾರು ಐಟಿ-ಬಿಟಿ ಕಂಪನಿಗಳಿರುವ ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಕೆ.ಆರ್‌.ಪುರ ಜಂಕ್ಷನ್‌ವರೆಗಿನ 17 ಕಿ.ಮೀ. ರಸ್ತೆಯಲ್ಲಿ ಪ್ರವಾಹ ಉಂಟಾಗಿತ್ತು. ಇದರಿಂದ ಕಚೇರಿಗಳ ಕೆಲಸಕ್ಕೆ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಬೆಳ್ಳಂದೂರು ಬಳಿ ಆರ್‌ಎಂಝಡ್‌ ಇಕೋಸ್ಪೇಸ್‌ ಆವರಣ ಮತ್ತು ಸರ್ಜಾಪುರ ರಸ್ತೆಯಲ್ಲಿನ ವಿಪ್ರೋ ಸಂಸ್ಥೆ ಸೇರಿ ಅನೇಕ ಐಟಿ ಕಂಪನಿಗಳು ಮತ್ತು ವಸತಿ ಬಡಾವಣೆಗಳು ಜಲಾವೃತ ಆಗಿದ್ದವು. ಇದಕ್ಕೆಲ್ಲ ಬಿಬಿಎಂಪಿ ಅಸಮರ್ಪಕ ನಿರ್ವಹಣೆಯೇ ಕಾರಣವಾಗಿದೆ. ಹಾಗಾಗಿ, ಐಟಿ-ಬಿಟಿ ಕಂಪನಿಗಳ 17 ಕಿ.ಮೀ ಪ್ರದೇಶವನ್ನು ಪ್ರತ್ಯೇಕ ಮುನ್ಸಿಪಲ್‌ ವಲಯವೆಂದು ಘೋಷಿಸಬೇಕೆಂದು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘವು ಸರ್ಕಾರವನ್ನು ಆಗ್ರಹಿಸಿದೆ.
 
ಹೊರ ವರ್ತುಲ ರಸ್ತೆಯ ಪ್ರದೇಶದ ಅಭಿವೃದ್ಧಿ ನಿರ್ಲಕ್ಷಿಸಲಾಗಿದ್ದು, ಮೂಲ ಸೌಕರ್ಯ ಒದಗಿಸಲು ಸೂಕ್ತ ಮಾರ್ಗಸೂಚಿ ರಚಿಸಿಲ್ಲ. 17 ಕಿ.ಮೀ ವ್ಯಾಪ್ತಿಯನ್ನು ಪ್ರತ್ಯೇಕ ಮುನ್ಸಿಪಲ್‌ ವಲಯ ರಚನೆಯ ಅಗತ್ಯವಿದೆ. ಅಲ್ಲದೆ, ಐಟಿ-ಬಿಟಿ ಕಾರಿಡಾರ್‌ ಅಭಿವೃದ್ಧಿಗೆ ವಿಶೇಷ -ಗ್ರೇಷಿಯಾ ಅನುದಾನ ಒದಗಿಸುವುದು ಸೇರಿದಂತೆ 13 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಪ್ರವಾಹ ಸೃಷ್ಟಿಯಾದ ಇಕೋಸ್ಪೇಸ್‌ ಹಾಗೂ ಸುತ್ತಮುತ್ತಲಿನ ಸ್ಥಳಗಳನ್ನು ಕೂಡಲೇ ದುರಸ್ತಿಗೊಳಿಸಬೇಕು. ಹೊರ ವರ್ತುಲ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಮೆಟ್ರೋ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಮೆಟ್ರೋ ಸಂಸ್ಥೆ ಮತ್ತು ಒಆರ್‌ಆರ್‌ಸಿಎ ಸಮನ್ವಯ ಸಾಧಸಿಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಬೇಕು. ಐಟಿ ಕಾರಿಡಾರ್‌ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆಗಳ ಅಭಿವೃದ್ಧಿಗೆ 2019ರಲ್ಲಿ ಅನುಮೋದನೆ ನೀಡಿದ್ದು, ಅವುಗಳನ್ನು 6 ತಿಂಗಳೊಳಗೆ ಪೂರ್ಣಗೊಳಿಸಬೇಕು. ಮೆಟ್ರೋ ಮಾರ್ಗ ನಿರ್ಮಾಣದ ವೇಳೆ ಮುಖ್ಯ ರಸ್ತೆ ಮತ್ತು ಸರ್ವಿಸ್‌ ರಸ್ತೆಗಳನ್ನು ಸುಸ್ಥಿತಿಯಲ್ಲಿಟ್ಟು ಟ್ರಾಫಿಕ್‌ ಮತ್ತು ಸಿಗ್ನಲ್‌ ಫ್ರೀ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು. ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರನ್ನು ನಿಯೋಜಿಸಬೇಕು ಎಂದು ಒಆರ್‌ಆರ್‌ಸಿಎ ಕೋರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ