ವೈದ್ಯಕೀಯ ಕ್ಷೇತ್ರಕ್ಕೆ ಮೋದಿ ಕೊಡುಗೆ ಬಗ್ಗೆ ಪಟ್ಟಿ ಮಾಡಿ ತಿಳಿಸಿದ ಡಾ ಸಿಎನ್ ಮಂಜುನಾಥ್

Krishnaveni K

ಮಂಗಳವಾರ, 9 ಏಪ್ರಿಲ್ 2024 (16:01 IST)
ಬೆಂಗಳೂರು: ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಆಡಳಿತದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಐತಿಹಾಸಿಕ ಬದಲಾವಣೆಗಳು ಆಗಿವೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ತಿಳಿಸಿದರು.
 
ಹೋಟೆಲ್ ಜಿ.ಎಂ. ರಿಜಾಯ್ಸ್‍ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದಾಗ ಜೀವಿತಾವಧಿ (ಲೈಫ್ ಸ್ಪಾನ್) 37 ವರ್ಷ ಇದ್ದುದು ಈಗ ಸುಮಾರು 70 ವರ್ಷಕ್ಕೆ ಬಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳಾಗಿವೆ. ಚಿಕಿತ್ಸಾ ವ್ಯವಸ್ಥೆ ಕೂಡ ಚೆನ್ನಾಗಿ ಮುಂದುವರೆಯುತ್ತಿದೆ ಎಂದು ವಿಶ್ಲೇಷಿಸಿದರು.
 
ಮೋದಿಯವರು ಆಡಳಿತ ಆರಂಭಿಸುವ ಮೊದಲು ದೇಶದಲ್ಲಿ 5 ಏಮ್ಸ್ (ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ) ಇತ್ತು. ಇವತ್ತು 23 ಏಮ್ಸ್ ಇದೆ. ಭಾರತದಲ್ಲಿ ಹಾರ್ಟ್ ಅಟ್ಯಾಕ್, ಡಯಾಬಿಟಿಸ್, ಹೈ ಬ್ಲಡ್ ಪ್ರೆಶರ್, ಸ್ಟ್ರೋಕ್, ಕ್ಯಾನ್ಸರ್, ಸ್ಕ್ರೀನ್ ಅಡಿಕ್ಷನ್‍ನಂಥ ಲೈಫ್ ಸ್ಟೈಲ್ ಡಿಸೀಸ್ ಹೆಚ್ಚಾಗಿದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಈಗ ಹಾರ್ಟ್ ಅಟ್ಯಾಕ್‍ಗೆ ಸಿಲುಕುತ್ತಿದ್ದಾರೆ. ಹಾರ್ಟ್ ಅಟ್ಯಾಕ್ ತಡೆಯಲು ಆಂಜಿಯೋಪ್ಲಾಸ್ಟಿ ಅಥವಾ ಸ್ಟೆಂಟ್ ಬಳಸುತ್ತಾರೆ. ಮೋದಿಯವರು ಆಡಳಿತಕ್ಕೆ ಬರುವ ಮೊದಲು ಸ್ಟೆಂಟ್ ಬೆಲೆ 1 ಲಕ್ಷ, 70 ಸಾವಿರ ಇತ್ತು. ಅದನ್ನು 30 ಸಾವಿರಕ್ಕೆ ಇಳಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
 
ಭಾರತದಲ್ಲಿ ಪ್ರತಿ ವರ್ಷ 30 ಲಕ್ಷ ಜನರಿಗೆ ಹೃದಯಾಘಾತ ಆಗುತ್ತಿದೆ. ಹಾರ್ಟ್ ಅಟ್ಯಾಕ್ ಕೇವಲ ಶ್ರೀಮಂತರ ಕಾಯಿಲೆಯಲ್ಲ. ಅದು ಬಡವರ ಕಾಯಿಲೆಯೂ ಆಗಿದ್ದು, ಸ್ಟೆಂಟ್ ದರ ಇಳಿಸಿದ್ದರಿಂದ ಬಹಳಷ್ಟು ಜನರಿಗೆ ಪ್ರಯೋಜನ ಆಗಿದೆ. ನಮ್ಮ ದೇಶದಲ್ಲಿ 14 ಕೋಟಿ ಜನರು ಸಕ್ಕರೆ ಕಾಯಿಲೆಯಿಂದ (ಡಯಾಬಿಟಿಸ್) ಬಳಲುತ್ತಿದ್ದಾರೆ. ಇನ್ನೂ 14 ಕೋಟಿ ಜನರು ಡಯಾಬಿಟಿಸ್ (ಪ್ರಿ ಡಯಾಬಿಟಿಕ್) ಸನಿಹದಲ್ಲಿದ್ದಾರೆ ಎಂದು ವಿವರಿಸಿದರು.
 
ಹೈ ಬಿಪಿ, ಡಯಾಬಿಟಿಸ್, ಹಾರ್ಟ್ ಅಟ್ಯಾಕ್ ಉಳ್ಳವರು ಜೀವಿತಾವಧಿಯಿಡೀ ಔಷಧಿ ತೆಗೆದುಕೊಳ್ಳಬೇಕು. ಈ ಕಾಯಿಲೆಗಳು ಬಡವರಲ್ಲೂ ಇವೆ. ಕೈಗೆಟಕುವ ದರದಲ್ಲಿ ಔಷಧಿ ಸಿಗಬೇಕೆಂಬ ದೃಷ್ಟಿಯಿಂದ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆದಿದ್ದಾರೆ. ಕರ್ನಾಟಕದಲ್ಲಿ 1120 ಜನೌಷಧಿ ಕೇಂದ್ರಗಳಿವೆ. 1 ಸಾವಿರ ದರದ ಔಷಧಿ 100ರಿಂದ 150 ರೂಪಾಯಿಗೆ ಸಿಗುತ್ತಿದೆ ಎಂದು ತಿಳಿಸಿದರು.
 
ಕೋವಿಡ್ ಬಿಕ್ಕಟ್ಟನ್ನು ಮೋದಿಯವರು ನಿಭಾಯಿಸಿದ ರೀತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯೂ ಶ್ಲಾಘಿಸಿದೆ. ಅಮೆರಿಕ, ಜಪಾನ್, ಚೀನಾ, ಯುರೋಪ್ ರಾಷ್ಟ್ರಗಳಿಗಿಂತ ಚೆನ್ನಾಗಿ ನಾವು ಕೋವಿಡ್ ನಿಭಾಯಿಸಿದ್ದೇವೆ. ರಾಷ್ಟ್ರೀಯ- ರಾಜ್ಯ ಟಾಸ್ಕ್ ಫೋರ್ಸ್ ತಂಡ ರಚಿಸಿ, ನಿರಂತರ ವರ್ಚುವಲ್ ಸಭೆಗಳನ್ನು ನಡೆಸಿ ಅವರು ಇದನ್ನು ನಿಭಾಯಿಸಿದರು ಎಂದು ವಿಶ್ಲೇಷಣೆ ಮಾಡಿದರು. 270 ಕೋಟಿ ವ್ಯಾಕ್ಸಿನ್ ಡೋಸ್ ಕೊಡಲಾಯಿತು ಎಂದರು.
 
ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಕ್ರಮಗಳಿಂದ ವೆಂಟಿಲೇಟರ್ ಉತ್ಪಾದನೆ, ರೋಗಿಗಳ ಚಿಕಿತ್ಸೆಗೆ ಬೇಕಾದ ಆಮ್ಲಜನಕ ಉತ್ಪಾದನೆ ಸೇರಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಸಾಧ್ಯವಾಗಿದೆ. ಇವತ್ತು ನಮ್ಮ ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಐಸಿಯು ಬೆಡ್ ಲಭ್ಯವಿದೆ ಎಂದು ತಿಳಿಸಿದರು.
 
ಬಿಪಿಎಲ್ ರೋಗಿಗಳಿಗೆ ನೆರವಾಗುವ ಉಚಿತ ಚಿಕಿತ್ಸೆ ಕೊಡುವ ಆಯುಷ್ಮಾನ್ ಭಾರತ್ ಸ್ಕೀಮಿನಿಂದ ಕರ್ನಾಟಕ ರಾಜ್ಯದಲ್ಲಿ ಕಳೆದ ಆರೇಳು ವರ್ಷಗಳಲ್ಲಿ 1.32 ಕೋಟಿ ಜನರು ಚಿಕಿತ್ಸೆ ಪಡೆದಿದ್ದಾರೆ. ಇದೊಂದು ಉತ್ತಮ ಯೋಜನೆ ಎಂದು ತಿಳಿಸಿದರು. 2014ಕ್ಕಿಂತ ಮೊದಲು ವೈದ್ಯಕೀಯ ಕಾಲೇಜುಗಳ ಸಂಖ್ಯೆ 387 ಇತ್ತು. ಈಗ 780 ವೈದ್ಯಕೀಯ ಕಾಲೇಜುಗಳಿವೆ. ಎಂಬಿಬಿಎಸ್ ಸೀಟುಗಳ ಸಂಖ್ಯೆ 51 ಸಾವಿರದಿಂದ 1 ಲಕ್ಷ 20 ಸಾವಿರಕ್ಕೆ ಏರಿಕೆ ಕಂಡಿದೆ ಎಂದು ಮಾಹಿತಿ ನೀಡಿದರು.
 
ವೈದ್ಯ ಸ್ನಾತಕೋತ್ತರ ಸೀಟುಗಳ ಸಂಖ್ಯೆಯೂ 30 ಸಾವಿರದಿಂದ 95 ಸಾವಿರಕ್ಕೆ ಏರಿದೆ. ಎಲ್ಲ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಇರುವುದರಿಂದ ರೋಗಿಗಳಿಗೆ ಸಮರ್ಪಕ, ಸಕಾಲಿಕ ಚಿಕಿತ್ಸೆ ಸಿಗುತ್ತಿದೆ ಎಂದು ಹೇಳಿದರು. ಇದು ಅತ್ಯಂತ ಪ್ರಮುಖವಾದುದು ಎಂದರು. ಕೇಂದ್ರ ಸರಕಾರದ ನ್ಯಾಷನಲ್ ಹೆಲ್ತ್ ಮಿಷನ್‍ನಡಿ ಹಾರ್ಟ್ ಅಟ್ಯಾಕ್ ಆದವರಿಗೆ ಗೋಲ್ಡನ್ ಅವರ್‍ನಲ್ಲಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಹೇಳಿದರು.
 
ನೇಚುರೋಪತಿ ಮತ್ತು ಯೋಗಕ್ಕೆ ಸಂಬಂಧಿಸಿದ ಆರೋಗ್ಯ ಟೂರಿಸಂ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿದೆ. ಇದಕ್ಕಾಗಿ ಭಾರತಕ್ಕೆ ಭೇಟಿ ಕೊಡುವ ವಿದೇಶೀಯರ ಸಂಖ್ಯೆಯೂ ಹೆಚ್ಚಾಗಿದೆ ಎಂದು ತಿಳಿಸಿದರು.
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ