ರಾಜ್ಯದಲ್ಲಿ ಇದೇ ಮೊದಲ ಬಾರಿ ಸರ್ಕಾರಿ ಸ್ವಾಮ್ಯದಲ್ಲಿ ಪ್ರಾರಂಭವಾಗಿರುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸುಸಜ್ಜಿತ ಮಾವು ಸಂಸ್ಕರಣಾ ಘಟಕ ಮೊದಲ ವರ್ಷವೇ 25 ಟನ್ ಮಾವಿನ ಹಣ್ಣು ಸಂಸ್ಕರಿಸಿ ವಿವಿಧ ದೇಶಗಳಿಗೆ ರಫ್ತು ಮಾಡಿದೆ.
ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಮಾಡಿಕೆರೆಯಲ್ಲಿ ಸುಮಾರು 1.10 ಕೋಟಿ ರು. ವೆಚ್ಚದಲ್ಲಿ ಪ್ರಾರಂಭಿಸಿರುವ ಸಂಸ್ಕರಣಾ ಘಟಕವು ಫರೀದಾಬಾದ್ನ ರಾಷ್ಟ್ರೀಯ ಸಸ್ಯ ಉತ್ಪನ್ನ ಮತ್ತು ಸಂಸ್ಕರಣ ಕೇಂದ್ರ,
ರಾಜ್ಯದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದಿಂದ ಮಾನ್ಯತೆ ಪಡೆದುಕೊಂಡಿದೆ. ರಾಜ್ಯದ ಮಾವಿನ ಓಟೆಯಲ್ಲಿ ಹುಳ ಕಂಡು ಬರುತ್ತಿತ್ತು.
ಇದೇ ಕಾರಣದಿಂದಾಗಿ ಭಾರತದಲ್ಲಿ ಬೆಳೆಯುತ್ತಿರುವ ಮಾವಿನ ಹಣ್ಣುಗಳಿಗೆ ಹೊರ ರಾಷ್ಟ್ರಗಳು ನಿಷೇಧ ಹೇರಿದ್ದವು. ಇದರಿಂದ ಮಾವಿನ ರಫ್ತಿನ ಮೇಲೆ ಪರಿಣಾಮ ಬೀರಿತ್ತು. ಹಾಗಾಗಿ ವಿದೇಶಗಳಿಗೆ ಗುಣಮಟ್ಟದ ಮಾವು ರಫ್ತು ಮಾಡಲು ಸಂಸ್ಕರಣಾ ಘಟಕ ಪ್ರಾರಂಭಿಸಲಾಗಿದೆ.
ಈ ಘಟಕದಿಂದ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ಬೆಳೆಗಾರರು ತಮ್ಮ ಉತ್ಪನ್ನಗಳ ಸಂಸ್ಕರಣೆ ಮಾಡಿ ರಫ್ತು ಮಾಡಲು ನೆರವಾಗಲಿದೆ ಎಂದು ಮಾವು ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.