ಬೇಕಾಬಿಟ್ಟಿ ಆಡುವ ಮಾಲ್ ಗಳ ಬಾಲ ಕತ್ತರಿಸಲು ಬರಲಿದೆ ಈ ಹೊಸ ನಿಯಮಗಳು

Krishnaveni K

ಸೋಮವಾರ, 22 ಜುಲೈ 2024 (10:10 IST)
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿರುವ ಕೆಲವು ಮಾಲ್ ಗಳು ತಾವು ಮಾಡಿದ್ದೇ ರೂಲ್ಸ್ ಎನ್ನುವಂತೆ ಆಡುತ್ತಿದ್ದವು. ಇದಕ್ಕೆ ಇತ್ತೀಚೆಗೆ ನಡೆದ ಜಿಟಿ ಮಾಲ್ ಘಟನೆಯೇ ಸಾಕ್ಷಿ. ಇದೀಗ ಮಾಲ್ ಗಳಿಗೆ ಕಡಿವಾಣ ಹಾಕಲು ಸ್ಥಳೀಯಾಡಳಿತ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.

ಇತ್ತೀಚೆಗೆ ರೈತ ಫಕೀರಪ್ಪ ಎಂಬವರು ಪಂಚೆ ಉಟ್ಟು ಬಂದಿದ್ದರೆಂಬ ಕಾರಣಕ್ಕೆ ಜಿಟಿ ಮಾಲ್ ಒಳಗೆ ಬಿಡದೇ ಅವಮಾನಿಸಲಾಯಿತು. ಈ ಪ್ರಕರಣ ವಿಧಾನಸಭೆಯಲ್ಲೂ ಸದ್ದು ಮಾಡಿತು. ಬಳಿಕ ಬಿಬಿಎಂಪಿ ಜಿಟಿ ಮಾಲ್ ಗೆ ತೆರಿಗೆ ಪಾವತಿಸಿಲ್ಲ ಎಂಬ ಕಾರಣಕ್ಕೆ ನೋಟಿಸ್ ನೀಡಿತು. ಘಟನೆ ಬಳಿಕ ಮಾಲ್ ಗೆ 7 ದಿನ ಬೀಗ ಹಾಕಲಾಯಿತು.

ಈ ಘಟನೆ ಬಳಿಕ ಈಗ ನಗರಾಭಿವೃದ್ಧಿ ಇಲಾಖೆ ಮಾಲ್ ಗಳಿಗೆ ಕೆಲವು ಕಠಿಣ ನಿಯಮ ಪಾಲನೆ ಮಾಡಲು ಸೂಚನೆ ನೀಡಿದೆ. ಇನ್ನು ಮುಂದೆ ಮಾಲ್ ನಲ್ಲಿ ಯಾವುದೇ ಕಾರಣಕ್ಕೂ ಡ್ರೆಸ್ ಕೋಡ್ ಜಾರಿಗೆ ತರುವಂತಿಲ್ಲ. ಇದಕ್ಕೆ ಪ್ರತ್ಯೇಕ ಕಾನೂನು ಜಾರಿಗೆ ತರಲಾಗುವುದು. ಕೇವಲ ಮಾಲ್ ಮಾತ್ರವಲ್ಲ ಪಬ್, ಕ್ಲಬ್ ಗಳಿಗೂ ಇದು ಅನ್ವಯವಾಗಲಿದೆ.

ಸೀರೆ, ಪಂಚೆಯಂತಹ ಸಾಂಪ್ರದಾಯಿಕ ಉಡುಗೆ ತೊಟ್ಟುಕೊಂಡು ಬಂದರೆ ಪ್ರವೇಶ ನಿರಾಕರಿಸುವಂತಿಲ್ಲ. ಒಂದು ವೇಳೆ ಇಂತಹ ಕಾರಣಗಳಿಗೆ ಪ್ರವೇಶ ನಿರಾಕರಿಸಿದರೆ ದೊಡ್ಡ ಮೊತ್ತದ ದಂಡ ಅಥವಾ, ಮಾಲ್ ಬಂದ್ ಮಾಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಎಚ್ಚರಿಕೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ