ಹಾಸನ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಟಿಕೆಟ್ ಆಕಾಂಕ್ಷಿಗಳು ಮತ್ತು ಈಗಾಗಲೇ ಟಿಕೆಟ್ ಖಾತ್ರಿಯಾಗಿರುವವರು ಪ್ರಚಾರ ಬಿರುಸುಗೊಳಿಸುವ ಮೂಲಕ ಮತ ಬೇಟೆಯಲ್ಲಿ ತೊಡಗಿದ್ದಾರೆ.
ಮತ್ತೊಂದೆಡೆ ಪಕ್ಷಾಂತರ ಪರ್ವ ಸಹ ಜೋರಾಗಿದೆ. ಹಾಸನ ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರದಿಂದ ಗೊಂದಲಕ್ಕೀಡಾದ ಕಾರ್ಯಕರ್ತರು ಜೆಡಿಎಸ್ ಪಕ್ಷ ತೊರೆಯಲು ಮುಂದಾಗಿದ್ದಾರೆ.
ಹಾಸನ ಜಿಲ್ಲೆಯ ಜೆಡಿಎಸ್ನಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಲೇ ಇದೆ. ಕೆಲ ದಿನಗಳ ಹಿಂದಷ್ಟೇ ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರುವುದು ಪಕ್ಕಾ ಆಗಿದೆ.
ಅದಾದ ಮೇಲೆ ಶಾಸಕ ಎ.ಟಿ.ರಾಮಸ್ವಾಮಿ ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದ್ದರು. ಇದರ ನಡುವೆ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಕೆಲವೇ ದಿನಗಳು ಬಾಕಿ ಇವೆ. ಮತ್ತೊಂದೆಡೆ ಅರಕಲಗೂಡು ಕ್ಷೇತ್ರದ ಹಾಲಿ ಶಾಸಕ ಎ.ಟಿ ರಾಮಸ್ವಾಮಿ ಬಿಜೆಪಿ ಸೇರುತ್ತಾರೋ ಇಲ್ಲವೇ ಕಾಂಗ್ರೆಸ್ನತ್ತ ಮುಖ ಮಾಡುತ್ತಾರೋ ಅನ್ನೋದು ಕೂತುಹಲ ಕೆರಳಿಸಿದೆ.