“ಶಾಲೆಗಳ ಬಲವರ್ಧನೆಗೆ ಸಮುದಾಯದ ಸಹಕಾರ ಅಗತ್ಯ”

ಸೋಮವಾರ, 27 ಡಿಸೆಂಬರ್ 2021 (19:58 IST)
ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಮುದಾಯದ ಸಹಕಾರ ಅಗತ್ಯವಾಗಿದ್ದು, ದಾನಿಗಳು ಹಾಗೂ ಪೋಷಕರು ಸಾಧನ ಸಂಪನ್ಮೂಲ ಒದಗಿಸುವ ಮೂಲಕ ಸರ್ಕಾರಿ ಶಾಲೆಗಳ ಪ್ರಗತಿ ಮತ್ತು ಬಲವರ್ಧನೆಗೆ ಮುಂದಾಗಬೇಕು ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಉಪ ನಿರ್ದೇಶಕರಾದ (ಅಭಿವೃದ್ಧಿ) ಸಂಸ್ಥೆಯ ಪ್ರಾಂಶುಪಾಲ ಕೆ.ವಿ.ಸುರೇಶ್ ಮನವಿ ಮಾಡಿದರು.
ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್.ಡಿ.ಎಂ.ಸಿ.ವತಿಯಿಂದ ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ಪೋಷಕರ ಸಭೆಯಲ್ಲಿ ಪೋಷಕರೊಂದಿಗೆ ಮಕ್ಕಳ ಶೈಕ್ಷಣಿಕ ಕಲಿಕಾ ಪ್ರಗತಿ ಕುರಿತು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳಲ್ಲಿ ಕಲಿಕೆಯ ಜತೆಗೆ ಸೃಜನಶೀಲತೆ, ಕ್ರಿಯಾಶೀಲತೆ, ಸಂಸ್ಕಾರ, ಮೌಲ್ಯ ತುಂಬಲು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ ಎಂದರು.
ಸಮುದಾಯ ಮತ್ತು ದಾನಿಗಳು ಶಾಲಾ ಪ್ರಗತಿಗೆ ಸಹಕಾರ ನೀಡಬೇಕು. ಶಾಲೆಯು ಕಲಿಕೆ ಹಾಗೂ ಉತ್ತಮ ಶಿಕ್ಷಕರನ್ನು ಹೊಂದಿದ್ದು, ಇಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು ಎಂಬುದು ಸರ್ಕಾರದ ಧ್ಯೇಯ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಬೇಕು. ಪೋಷಕರು ದಿನನಿತ್ಯ ತಮ್ಮ ಮಕ್ಕಳ ಚಲನ ವಲನವನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಮನೆಯಲ್ಲಿ ಮಕ್ಕಳ ಕಲಿಕೆಗೆ ಹೆಚ್ಚಿನ ಗಮನ ಹರಿಸಬೇಕು. ಪೋಷಕರು ಕನಿಷ್ಟ ತಿಂಗಳಿಗೊಮ್ಮೆ ತಮ್ಮ ಮಕ್ಕಳ ಕಲಿಕಾ ಪ್ರಗತಿ ತಿಳಿಯಲು ಶಾಲೆಗೆ ಭೇಟಿ ನೀಡಬೇಕು ಎಂದು ಸುರೇಶ್ ಸಲಹೆ ನೀಡಿದರು.
ಕೋವಿಡ್ ಮಾರ್ಗಸೂಚಿಯನ್ವಯ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ವಿಶೇಷ ಗಮನಹರಿಸಲಾಗಿದೆ. ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕೂಡ ವಿಶೇಷ ಗಮನಹರಿಸಬೇಕು ಎಂದರು.
ಗ್ರಾಮ ಪಂಚಾಯ್ತಿ ಸದಸ್ಯ ಕೆ.ಕೆ.ಭೋಗಪ್ಪ ಮಾತನಾಡಿ, ಸಮುದಾಯವನ್ನು ಶಾಲೆಯ ಅಭಿವೃದ್ಧಿಗೆ ಸೆಳೆಯುವ ಪ್ರಯತ್ನ ಇದಾಗಿದ್ದು ಪೋಷಕರು ಮಕ್ಕಳ ಕಲಿಕೆಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ತಿಳಿಸಿದರು.
ಸಮುದಾಯದತ್ತ ಶಾಲಾ ಕಾರ್ಯಕ್ರಮದ ಧ್ಯೇಯೋದ್ದೇಶದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಪೋಷಕರು ಆಗಿಂದಾಗ್ಗೆ ಶಾಲೆಗೆ ಆಗಮಿಸಿ ಮಕ್ಕಳ ಕಲಿಕಾ ಪ್ರಗತಿ ಕುರಿತು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಬೇಕು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ