ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ನೀರು ಒದಗಿಸುವ ಪ್ರಮುಖ ನೀರಿನ ಮೂಲವಾದ ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ನೀರಿನ ಸಂಗ್ರಹಣಾ ಮಟ್ಟ ಕುಸಿದಿರುವುದರಿಂದ ಮೂರು ಜಿಲ್ಲೆಗಳ ಜನರನ್ನು ಆತಂಕಕ್ಕೆ ದೂಡಿದೆ. 51 ಟಿಎಂಸಿ ಸಾಮರ್ಥ್ಯ ಡ್ಯಾಂನಲ್ಲಿ ಕೇವಲ ನಾಲ್ಕು ಟಿಎಂಸಿ ನೀರು ಮಾತ್ರ ಇದೆ. ಅದರಲ್ಲಿ ಎರಡು ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ. ಇನ್ನೇರಡು ಟಿಎಂಸಿ ನೀರು ಮಾತ್ರ ಬಳಕೆ ಮಾಡಲು ಅವಕಾಶವಿದೆ. ಇನ್ನೊಂದು ವಾರದಲ್ಲಿ ಮಳೆ ಆಗದಿದ್ರೇ ಬೆಳಗಾವಿ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ. ಹಿಡಕಲ್ ಅಣೆಕಟ್ಟು ಯೋಜನೆಯಿಂದ ಬೆಳಗಾವಿ, ಹುಕ್ಕೇರಿ, ಸಂಕೇಶ್ವರ, ಬಾಗಲಕೋಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಮತ್ತು ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.