ನಿಗಮಗಳಿಗೆ ವಿಶೇಷ ಅನುದಾನ ನೀಡಲು ಆಗಲ್ಲ
ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ.ಎಸ್ ಪುಷ್ಪಾ ಅವರು KSRTC, BMTC ಸೇರಿದಂತೆ 4 ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದು ಸಾರಿಗೆ ಸಂಸ್ಥೆಗಳಿಗೆ ಉಂಟಾಗುವ ಆರ್ಥಿಕ ಹೊರೆ ಸರಿದೂಗಿಸಲು ಹೆಚ್ಚುವರಿ ವಿಶೇಷ ಅನುದಾನ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಸಾರಿಗೆ ನಿಗಮಗಳ ಸಿಬ್ಬಂದಿ ವೇತನ ಪರಿಷ್ಕರಣೆಯ ಹೆಚ್ಚುವರಿ ವೆಚ್ಚ ನಿಭಾಯಿಸಲು ಹಾಗೂ ವೇತನ ಪಾವತಿ, ಇಂಧನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಿಲ್ಲ. ನಿಗಮಗಳು ಆಂತರಿಕ ಸಂಪನ್ಮೂಲಗಳಿಂದಲೇ ಇದನ್ನು ಭರಿಸುವಂತೆ ಜೂನ್ 7ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಶಕ್ತಿ ಯೋಜನೆಗೆ ಸರ್ಕಾರದಿಂದ 4 ಸಾವಿರ ಕೋಟಿಯಷ್ಟು ವಾರ್ಷಿಕ ಹೆಚ್ಚುವರಿ ಹೊರೆ ತಗುಲಲಿದೆ. ಹೀಗಾಗಿ ನಿಗಮಗಳಿಗೆ ಹೆಚ್ಚುವರಿ ವಿಶೇಷ ಅನುದಾನ ಒದಗಿಸಲು ಅವಕಾಶ ಇಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಟೀಕಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಕ್ತಿ ಯೋಜನೆಯಿಂದಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಇತರೆ ಸಾರಿಗೆ ಸಂಸ್ಥೆಗಳಿಗೆ ಉಂಟಾಗುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಹೆಚ್ಚುವರಿ ಅನುದಾನ ನೀಡಲಾಗುವುದಿಲ್ಲವೆಂದು ಆರ್ಥಿಕ ಇಲಾಖೆ ಸಾರಿಗೆ ಸಂಸ್ಥೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಸಿದ್ದರಾಮಯ್ಯನವರೇ ಸಾರಿಗೆ ಸಂಸ್ಥೆಗಳ ನೌಕರರ ಸಂಬಳ ಹಾಗೂ ನಿಗಮಗಳ ಅಭಿವೃದ್ಧಿಯ ಕಥೆ ಏನು? ಎಂದು ಪ್ರಶ್ನಿಸಿದ್ದಾರೆ.