ಉಡುಪಿ : ನಾಳೆಯೂ ಡ್ರಾಮಾ ಮುಂದುವರಿದರೆ ಕ್ರಿಮಿನಲ್ ಕೇಸ್, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಶಾಸಕ ರಘುಪತಿ ಭಟ್ ಆಕ್ರೋಶ ಹೊರಹಾಕಿದ್ದಾರೆ.
ಹಿಜಬ್ ಹೈಡ್ರಾಮಾ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲಿಯಾ ರೇಶಂ ಹಿಜಬ್ ತೆಗೆದು ಹಾಲ್ ಟಿಕೆಟ್ ತೆಗೆದುಕೊಂಡಿದ್ದರು. ಹಾಲ್ ಟಿಕೆಟ್ ಪಡೆಯಲು ನಿನ್ನೆ ಸಂಜೆಯವರೆಗೆ ಅವಕಾಶ ಕೊಡಲಾಗಿತ್ತು.
ಕಾಲೇಜಿನಿಂದ ಫೋನ್ ಮಾಡಿ ಅವರಿಗೆ ಹಾಲ್ ಟಿಕೆಟ್ ಬಗ್ಗೆ ಹೇಳಲಾಗಿತ್ತು. ಪೋಷಕರಿಗೂ ಕೂಡ ಹಾಲ್ ಟಿಕೆಟ್ ಪಡೆಯುವ ಬಗ್ಗೆ ಮನವರಿಕೆ ಮಾಡಲಾಗಿತ್ತು ಎಂದರು.
ಬೆಳಗ್ಗೆ 9.30ರ ನಂತರ ಹಾಲ್ ಟಿಕೆಟ್ಗೆ ಕಾಲೇಜಿಗೆ ಬಂದಿದ್ದಾರೆ. ಹಿಜಬ್ ತೆಗೆದು ಪರೀಕ್ಷೆ ಬರೆಯುವುದಾಗಿ ಒಪ್ಪಿದ್ದಾರೆ. ಹಾಲ್ ಟಿಕೆಟ್ ತೆಗೆದುಕೊಳ್ಳುವಾಗಲೂ ವಿದ್ಯಾರ್ಥಿಗಳು ಹಿಜಬನ್ನು ತೆಗೆದು ಇಟ್ಟಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ವಿದ್ಯಾರ್ಥಿಗಳು ಡ್ರಾಮಾ ಮಾಡಿದ್ದಾರೆ ಎಂದು ಶಾಸಕರು ಕಿಡಿಕಾರಿದರು. ಇದೇ ರೀತಿ ನಾಳೆಯೂ ಡ್ರಾಮಾ ಮುಂದುವರಿದರೆ ಕ್ರಿಮಿನಲ್ ಕೇಸ್, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ. ಈ ಕುರಿತು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ.
ನಾಳೆಯಿಂದ ನಾಟಕ ಮಾಡಿದರೆ ಕಂಡಂಕ್ಟ್ ಆಫ್ ಕೋರ್ಟು ಕೇಸು ದಾಖಲಿಸುತ್ತೇವೆ. ಪರೀಕ್ಷಾ ಕೇಂದ್ರದಲ್ಲಿ ಹುಡುಗಾಟಿಕೆ ಮಾಡುವಂತಿಲ್ಲ. ಈ ಮಕ್ಕಳನ್ನು ನಾವು ಇನ್ನು ಮುಂದೆ ಲಘುವಾಗಿ ಪರಿಗಣಿಸುವುದಿಲ್ಲ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಕ್ರಿಮಿನಲ್ ಕೇಸು ಹಾಕಿ ಎಂದು ಆಗ್ರಹ ಮಾಡಿದ್ದೇನೆ ಎಂದರು.