ಮಾನವೀಯತೆ ಮರೆತ ಅಧಿಕಾರಿಗಳು

ಶನಿವಾರ, 11 ಆಗಸ್ಟ್ 2018 (14:19 IST)
ತನ್ನ ಮಗುವಿನ ಅಂಗವಿಕಲ ವೇತನಕ್ಕಾಗಿ ತಾಯಿಯೋರ್ವಳು ವಿಕಲಚೇತನ ಮಗುವನ್ನು ಕಚೇರಿ ಕೌಂಟರ್ ಕೆಳಗಡೆ ಮಲಗಿಸಿ ಪರಿಪರಿಯಾಗಿ ಕೇಳಿಕೊಂಡ ಘಟನೆ ನಡೆದಿದೆ. ಆದರೂ ಅಧಿಕಾರಿಗಳು ಮಾನವೀಯತೆ ಮರೆತು ನಿರ್ಲಕ್ಷ್ಯ ತೋರಿದ್ದಾರೆ.


ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಾ ಕಚೇರಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತನ್ನ ಮಗುವಿನ ಅಂಗವಿಕಲ ವೇತನಕ್ಕಾಗಿ ತಾಯಿಯೋರ್ವಳು ವಿಕಲಚೇತನ ಮಗುವನ್ನು ಕಚೇರಿ ಕೌಂಟರ್ ಕೆಳಗಡೆ ಮಲಗಿಸಿ ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಆದರೂ ಅಲ್ಲಿಯ ಸಿಬ್ಬಂದಿ ಕಲ್ಲು ಮನಸ್ಸು ಕರಗಲೇ ಇಲ್ಲ. ಪಾವಸಂದ್ರ ಗ್ರಾಮದ ಮಹಿಳೆ ಕುಮಾರಿ, ತನ್ನ 7 ವರ್ಷದ ಅಂಗವಿಕಲ ಮಗ ಹರೀಶನ ಅಂಗವಿಕಲ ವೇತನಕ್ಕಾಗಿ ಅರ್ಜಿ ಹಾಕಲು ಬಂದಿದ್ರು. ಮಗುವನ್ನು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸೊಂಟದ ಮೇಲೆ ಎತ್ತಿಕೊಂಡು ಸಿಬ್ಬಂದಿ ಬಳಿ ಮಾಹಿತಿ ಕೇಳಿದ್ದಾಳೆ. ಆದರೂ ಯಾರೂ ಈ ಬಡ ಮಹಿಳೆ ಮಾತು ಕೇಳಿಲ್ಲ. ಸೊಂಟ‌ ಸೋತು ಬಂದಾಗ ಕಚೇರಿ ಕೌಂಟರ್ ಕೆಳಗೆ ಮಗುವನ್ನು ಮಲಗಿಸಿ ಪರಿಪರಿಯಾಗಿ ಕೇಳಿಕೊಂಡಿದ್ದಾಳೆ. ಆಗಲೂ ಸಿಬ್ಬಂದಿ ಅರೆಬರೆ ಮಾಹಿತಿ‌ ನೀಡಿದ್ದಾರೆ.

ಇದನ್ನು ಗಮನಿಸಿದ ಕರ್ನಾಟ ರಕ್ಷಣಾ ವೇದಿಕೆ ಕಾರ್ಯಕರ್ತ ಮಂಜುನಾಥ್, ಮಹಿಳೆ ಸಹಾಯಕ್ಕೆ ಧಾವಿಸಿದ್ದಾರೆ. ತಾಲೂಕಾ ಕಚೇರಿ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡು ಅಂಗವಿಕಲ ವೇತನದ ಅರ್ಜಿ ಹಾಕಲು ಸಹಾಯ ಮಾಡಿದ್ದಾರೆ. ಈ ನಡುವೆ ಒಂದೂವರೆ ವರ್ಷದ ಹಿಂದೆಯೇ ಮಧ್ಯವರ್ತಿ ಕೆಂಪಣ್ಣ‌ ಎನ್ನುವ ವ್ಯಕ್ತಿ ಅಂಗವಿಕಲ ವೇತನ ಕೊಡಿಸುವುದಾಗಿ ಹೇಳಿ 1300 ರೂ. ವಸೂಲಿ ಮಾಡಿದ್ದಾನಂತೆ. ಆತನಿಂದ ಕೆಲಸ ಆಗದೇ ಇದ್ದಾಗ ವಿಕಲಚೇತನ ಮಗುವನ್ನೇ ಎತ್ತಿಕೊಂಡು ತಾಲೂಕು ಕಚೇರಿಗೆ ಬಂದಿದ್ದು ನೋಡುಗರ ಕರುಳು ಚುರ್ರ್ ಎನಿಸುತಿತ್ತು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ