ಖಾಸಗಿ ಶಾಲೆಗಳ ನಿಯಂತ್ರಣ ಅಸಾಧ್ಯ: ಹೆಚ್.ವಿಶ್ವನಾಥ್

ಬುಧವಾರ, 8 ಸೆಪ್ಟಂಬರ್ 2021 (21:33 IST)
ಬೆಂಗಳೂರು: ಜಗತ್ತಿನ ಎಲ್ಲಾ  ದೇಶಗಳು ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ನೀಡಲು ಹೆಚ್ಚಿನ ಒತ್ತು ನೀಡುತ್ತಿರುವುದು ವಿಪರ್ಯಾಸ. ಅಕ್ಷರ ಮತ್ತು ಆರೋಗ್ಯ ಇವೆರಡು ಖಾಸಗಿಯವರ ಪಾಲಾಗಿದೆ. 2000 ಇಸವಿಯಲ್ಲಿ ಕೇವಲ 6 ಸಾವಿರ ಖಾಸಗಿ ಶಾಲೆಗಳಿದ್ದವು. ಈಗ 25 ಸಾವಿರ ಖಾಸಗಿ ಶಾಲೆಗಳಿವೆ. ಖಾಸಗಿ ಶಾಲೆಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಇವುಗಳ ನಿಯಂತ್ರಣ ಅಸಾಧ್ಯವಾಗಿದೆ ಎಂದು  ವಿಧಾನ ಪರಿಷತ್ತಿನ ಸದಸ್ಯ, ಮಾಜಿ ಸಚಿವ ಹೆಚ್.ವಿಶ್ವನಾಥ್ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅಭಿಪ್ರಾಯಪಟ್ಟರು.
 
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಗಳ ಸಹಯೋಗದಲ್ಲಿ ವಿಕಾಸಸೌಧದ ಸಭಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಕನ್ನಡ ಎಂಬ ವಿಷಯದ ಮೇಲೆ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯ, ಮಾಜಿ ಸಚಿವ ಹೆಚ್.ವಿಶ್ವನಾಥ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಮೈಸೂರು ಶಾಸಕ ತನ್ವೀರ್ ಸೇಠ್, ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. 
 
ಭಾಷೆ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖ:
 
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಕಾರ್ಯಕ್ರಮದಲ್ಲಿ  ಮಾತನಾಡಿ, ಭಾಷೆ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ರಾಜ್ಯಭಾಷೆಯಲ್ಲಿ ಸ್ಪಂದಿಸುವ ಶಕ್ತಿಯನ್ನು ಬಹು ಸುಲಭವಾಗಿ ಮಕ್ಕಳು ಪಡೆದುಕೊಳ್ಳುತ್ತಾರೆ. ಮಕ್ಕಳ ಚಿಂತನೆ, ಕ್ರಿಯಾಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಮಾತೃಭಾಷೆ ಅತ್ಯುತ್ತಮ ಸಾಧನವಾಗಿದೆ. ಮಕ್ಕಳು ಮಾತೃಭಾಷೆಯಲ್ಲಿ ಸ್ವಂತಿಕೆಯ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಮಂಡಿಸಬಹುದು. ಮಾತೃಭಾಷೆಯಲ್ಲಿ ಪ್ರಭುತ್ವ ಸಾಧಿಸಿದರೆ ಮಾತ್ರ ಅನ್ಯಭಾಷೆಗಳನ್ನು ಕಲಿಸುವುದು ಮತ್ತು ಕಲಿಯುವುದು ಸುಲಭ ಎಂದು ಅಭಿಪ್ರಾಯಪಟ್ಟರು.
 
ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿಸಿಕೊಂಡು ಈ ತರಹದ ವಿಚಾರ ಸಂಕಿರಣ ಆಯೋಜಿಸಿದರೆ ಶಿಕ್ಷಣದಲ್ಲಿ ಕನ್ನಡದ ಅನುಷ್ಠಾನ ಸಾಧ್ಯವಾಗಲಿದೆ. ಇವರನ್ನು ಒಳಗೊಂಡ ಚರ್ಚೆಯಲ್ಲಿ ಶಿಕ್ಷಣದಲ್ಲಿ ಕನ್ನಡ ಬಳಕೆಯ ಕುರಿತು ಯಾವ ನಿಯಮಗಳು ರೂಪುಗೊಳ್ಳಬೇಕು ಎಂದು ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
 
ಕನ್ನಡ ಕಲಿಕೆಯ ಬಗ್ಗೆ ತಿಳಿಸಬೇಕು:
 
ಶಾಸಕ ತನ್ವೀರ್ ಸೇಠ್ ವಿಚಾರಗೋಷ್ಠಿಯಲ್ಲಿ  ಮಾತನಾಡಿ, ಪ್ರತಿಯೊಂದು ಶಾಲೆಯಲ್ಲಿ ಕನ್ನಡ ಕಲಿಕೆ ಹೇಗೆ ಇರಬೇಕೆಂದು ಎಂಬುದನ್ನು ತಿಳಿಸಬೇಕು. 6 ವರ್ಷದ ವರೆಗಿನ  ಮಕ್ಕಳಿಗೆ ಯಾವ ರೀತಿ ಶಾಲೆಗಳು ಇರಬೇಕೆಂದು ಸ್ಪಷ್ಟವಾಗಿ ನಿಯಮ ರೂಪಿಸಿದ ಮೊದಲ ರಾಜ್ಯ ಕರ್ನಾಟಕ. ಶಾಲೆಯ ಸ್ವರೂಪ ಹೇಗಿರಬೇಕೆಂಬುದನ್ನು ಅದರಲ್ಲಿ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
 
ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಹಾಗೂ ಶಿಕ್ಷಣದಿಂದ ಜೀವನ ರೂಪಿಸಿಕೊಳ್ಳುವುದು ಇವೆರಡಲ್ಲಿ ಯಾವುದು ಮುಖ್ಯ ಎಂಬುದು ನೋಡಬೇಕಾಗುತ್ತದೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿರುವ ಕನ್ನಡ ಭಾಷಾ ಕಲಿಕೆಯ ಸಮಸ್ಯೆ ಬಗೆಹರಿಸಿದರೆ ಭಾಷಾ ಕಲಿಕಾ ವಿಚಾರದ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.
 
ಸಮಾನ ಶಿಕ್ಷಣದ ಕಡೆಗೆ ಹೊರಳಿ:
 
ಶಾಸಕ ಎನ್.ಮಹೇಶ್ ಕಾರ್ಯಕ್ರಮಲ್ಲಿ  ಮಾತನಾಡಿ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಶಾಲೆಗಳನ್ನು ವಿಭಾಗಿಸಿರುವ ವ್ಯವಸ್ಥೆ ಇದಾಗಿದೆ‌. ಶಿಕ್ಷಣ ವ್ಯವಸ್ಥೆ ಈ ರೀತಿಯಾಗಿ ಮುಂದುವರೆದರೆ ಬಡವ, ಮಾಧ್ಯಮ ವರ್ಗ ಹಾಗೂ ಶ್ರೀಮಂತ ಎಂಬ ಮೂರು ವರ್ಗಗಳು ರೂಪುಗೊಂಡು ಸಮಾಜದಲ್ಲಿ ಪುನಃ ಅಸಮಾನತೆ ರೂಪುಗೊಳ್ಳಲಿದೆ, ಆದ್ದರಿಂದ ನಾವು ಸಮಾನ ಶಿಕ್ಷಣದ ಕಡೆಗೆ ಹೊರಳಬೇಕಿದೆ ಎಂದರು.
 
ಹಿಂದಿ ರಾಷ್ಟ್ರೀಯ ಭಾಷೆ ಎಂಬುದನ್ನು ಸಂವಿಧಾನದಲ್ಲಿ ಎಲ್ಲೂ ವ್ಯಕ್ತವಾಗಿಲ್ಲ. ಆದರೆ ಹಿಂದಿ ರಾಷ್ಟ್ರೀಯ ಭಾಷೆ ಎಂಬ ಅವ್ಯಕ್ತ ವಾತಾವರಣ ಬಹಳ ಅಪಾಯಕಾರಿಯಾದುದು. ಕೇಂದ್ರ ಲೋಕಾಸೇವಾ ಆಯೋಗ ನಡೆಸುವ ಪೂರ್ವಭಾವಿ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿವೆ. ಆದರೆ ಅವು ಸ್ಥಳೀಯ ಭಾಷೆಯಲ್ಲಿರಬೇಕು. ಬ್ಯಾಂಕಿಂಗ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸ್ಥಳೀಯ ಭಾಷೆಯಲ್ಲಿರಬೇಕು. ಇಂಗ್ಲಿಷ್ ಸಂವಹನ ಭಾಷೆ ಅದರಲ್ಲಿ ಪ್ರಶ್ನೆ ಪತ್ರಿಕೆ ರೂಪಿಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಹಿಂದಿ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಯಾಕೆ ರೂಪಿಸಬೇಕು ಎಂದು ಪ್ರಶ್ನಿಸಿ, ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣ ನೀಡುವ ನೀತಿ ಜಾರಿಗೊಳಿಸಬೇಕು ಎಂದು ಹೇಳಿದರು.
 
3 ರಿಂದ 18 ವರ್ಷದ ಮಕ್ಕಳಿಗೆ ಸರ್ಕಾರ ಉಚಿತವಾಗಿ ಶಿಕ್ಷಣ ನೀಡಬೇಕು:
 
ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ ಮಾತನಾಡಿ, 3 ರಿಂದ 18 ವರ್ಷದ ಮಕ್ಕಳಿಗೆ ಸರ್ಕಾರವೇ ಉಚಿತವಾಗಿ ಶಿಕ್ಷಣ ನೀಡಬೇಕು. ಇದಕ್ಕೆ ಖಾಸಗಿಯವರು ಹಸ್ತಕ್ಷೇಪ ಮಾಡಬಾರದು. ಸಮಾನ ಶಿಕ್ಷಣ ನೀಡಬೇಕು‌. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಬೇಕು. ಈ ವರ್ಷವಿಡಿಈ ವಿಚಾರದ  ಬಗ್ಗೆ ಚರ್ಚೆ ನಡೆಸಬೇಕು ಎಂದರು.
 
ಕನ್ನಡ ಕೇವಲ ಒಂದು ಭಾಷೆಯಲ್ಲ: 
 
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತಕುಮಾರ್ ಮಾತನಾಡಿ, ಕನ್ನಡ ಕೇವಲ ಒಂದು ಭಾಷೆಯಲ್ಲ. ಅದು ಧರ್ಮ, ಸ್ವಭಾವ, ತನ, ಗುಣ. ಕನ್ನಡ ಕಟ್ಟುವುದು ಎಂದರೆ ಕನ್ನಡದ ಬೀಜಗಳನ್ನು ಮಕ್ಕಳ ಎದೆಯಲ್ಲಿ, ಭೂಮಿಯಲ್ಲಿ ಬಿತ್ತಬೇಕು. ಭಾರತೀಯತೆಗೆ ಭಂಗ ಬಾರದಂತೆ, ಸಿದ್ಧಾಂತ ಮತ್ತು ರಾಜಕೀಯ ಪಕ್ಷಗಳನ್ನು ಮೀರಿ ಶಿಕ್ಷಣದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಕೆಲಸವಾಗಬೇಕು ಎಂದರು.
 
ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಪ್ರಕಾಶ್ ಮತ್ತಿಹಳ್ಳಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು.
vishwanath

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ