ಖಾಸಗಿ ವಲಯದ ಬ್ಯಾಂಕ್ ಆದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ನಿಂದ ಉಳಿತಾಯ ಖಾತೆಗಳ (Savings Account) ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಗ್ರಾಹಕರು ಈಗ ಏಪ್ರಿಲ್ 1, 2022ರಿಂದ ಅನ್ವಯ ಆಗುವಂತೆ ತಮ್ಮ ಉಳಿತಾಯ ಖಾತೆಗಳ ಮೇಲೆ ಶೇ 6ರ ವರೆಗೆ (ಇದು ಮೊದಲು ಶೇ 5 ಆಗಿತ್ತು) ಬಡ್ಡಿಯನ್ನು ಗಳಿಸಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳ ಪ್ರಕಾರ, ಉಳಿತಾಯ ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿಯನ್ನು ದೈನಂದಿನವಾಗಿ ದಿನದ ಕೊನೆಯಲ್ಲಿ ಇರುವ ಬ್ಯಾಲೆನ್ಸ್ನಲ್ಲಿ ನಿರ್ಧರಿಸಲಾಗುತ್ತದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ನಿಂದ ಬಡ್ಡಿಯನ್ನು ಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ.
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಉಳಿತಾಯ ಖಾತೆ ಹೊಸ ಬಡ್ಡಿ ದರಗಳು
ಹೊಂದಾಣಿಕೆಯ ನಂತರ, ಬ್ಯಾಂಕ್ ಈಗ ರೂ. 1 ಲಕ್ಷಕ್ಕಿಂತ ಕಡಿಮೆ ಉಳಿತಾಯ ಖಾತೆಯ ಬ್ಯಾಲೆನ್ಸ್‌ಗಳ ಮೇಲೆ ಶೇಕಡಾ 4.00ರ ಬಡ್ಡಿ ದರವನ್ನು ಮತ್ತು ರೂ. 1 ಲಕ್ಷಕ್ಕಿಂತ ಹೆಚ್ಚು ಹಾಗೂ 10 ಲಕ್ಷಕ್ಕಿಂತ ಕಡಿಮೆ ಬ್ಯಾಲೆನ್ಸ್ ಇದ್ದಲ್ಲಿ ಶೇಕಡಾ 4.50 ಬಡ್ಡಿ ದರವನ್ನು ಒದಗಿಸುತ್ತದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಈಗ 10 ಲಕ್ಷಕ್ಕಿಂತ ಹೆಚ್ಚು ಆದರೆ 25 ಲಕ್ಷಕ್ಕಿಂತ ಕಡಿಮೆ ಇರುವ ಉಳಿತಾಯ ಖಾತೆಯ ಬ್ಯಾಲೆನ್ಸ್‌ಗಳ ಮೇಲೆ ಶೇ 5.00ರ ಬಡ್ಡಿ ದರವನ್ನು ನೀಡುತ್ತಿದೆ. ಉಳಿತಾಯ ಖಾತೆಯ ಗ್ರಾಹಕರು ಈಗ 25 ಲಕ್ಷ ರೂಪಾಯಿಗಳಿಂದ 1 ಕೋಟಿಗಿಂತ ಕಡಿಮೆ ಮೊತ್ತದ ಬ್ಯಾಲೆನ್ಸ್‌ಗಳ ಮೇಲೆ ಗರಿಷ್ಠ ಶೇ 6ರ ಬಡ್ಡಿದರವನ್ನು ಪಡೆಯುತ್ತಾರೆ.ರೂ. 1 ಕೋಟಿಗಿಂತ ಹೆಚ್ಚಿನ, ಆದರೆ ರೂ. 100 ಕೋಟಿಗಿಂತ ಕಡಿಮೆ ಇರುವ ದೈನಂದಿನ ಅಂತ್ಯದ ಬಾಕಿಗಳ ಮೇಲಿನ ಬಡ್ಡಿ ದರವು ಈಗ ಶೇಕಡ 5.00 ಆಗಿರುತ್ತದೆ. 100 ಕೋಟಿ ರೂಪಾಯಿಗಳಿಂದ 200 ಕೋಟಿ ರೂಪಾಯಿಗಿಂತ ಕಡಿಮೆ ಇರುವ ದಿನದ ಅಂತ್ಯದ ಬಾಕಿಗಳ ಮೇಲಿನ ಬಡ್ಡಿ ದರವು ಈಗ ಶೇಕಡಾ 4.50 ಆಗಿರುತ್ತದೆ. ಇನ್ನು 200 ಕೋಟಿ ರೂಪಾಯಿಗಿಂತ ಬ್ಯಾಲೆನ್ಸ್ ಹೆಚ್ಚಿದ್ದಲ್ಲಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಶೇ 3.50ರ ಬಡ್ಡಿ ದರವನ್ನು ನೀಡುತ್ತದೆ. ಈ ದರಗಳು ಏಪ್ರಿಲ್ 1, 2022ರಂದು ಜಾರಿಗೆ ಬರುತ್ತವೆ. “1ನೇ ಏಪ್ರಿಲ್ 2022ರಿಂದ ಉಳಿತಾಯ ಖಾತೆಯಲ್ಲಿ ಶೇ 6ರ ವರೆಗೆ ಬಡ್ಡಿದರಗಳನ್ನು ಗಳಿಸಿ” ಎಂದು ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.