ಕೇಂದ್ರ ಹಾಗೂ ರಾಜ್ಯದ ನಿರಾಸಕ್ತಿ ರೈತರ ಆತ್ಮಹತ್ಯೆ ಹೆಚ್ಚಳ- ಶಾಸಕ ಪ್ರಿಯಾಂಕ್ ಖರ್ಗೆ.
ಬುಧವಾರ, 14 ಡಿಸೆಂಬರ್ 2022 (20:57 IST)
ಡಾ ಸ್ವಾಮಿನಾಥನ್ ವರದಿ ಜಾರಿಗೆ ತಂದು ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಭರವಸೆ ನೀಡಿದ ಕೇಂದ್ರ ಸರ್ಕಾರ ತನ್ನ ಮಾತು ಮರೆತಿದೆ ಎಂದು ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ನೆಟೆರೋಗದ ಹಾವಳಿಯಿಂದಾಗಿ ಸಂಪೂರ್ಣ ಹಾಳಾಗಿರುವ ತೊಗರಿ ಬೆಳೆಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಿದ ಪ್ರತಿಭಟನೆಯ ನೇತೃತ್ವವಹಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಅವರು ಮಾತನಾಡುತ್ತಿದ್ದರು.
ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸದೆ ಇರುವುದರಿಂದ ರೈತರ ಆದಾಯ ದುಪ್ಪಟ್ಟು ಆಗದೆ ರೈತರ ಆತ್ಮಹತ್ಯೆ ದುಪ್ಪಟ್ಟು ಆಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಗಾರರು ನೆಟೆರೋಗದಿಂದ ಸಂಪೂರ್ಣ ಹಾನಿಅನುಭವಿಸಿದ್ದಾರೆ. ಈ ಸರ್ಕಾರದಲ್ಲಿ ನಮ್ಮ ರೈತರ ಗೋಳು ಕೇಳುವವರು ಇಲ್ಲ.
ಇದೇ ಸಮಸ್ಯೆ ಬೆಂಗಳೂರು ಕಡೆಯ ಯಾವುದೇ ಜಿಲ್ಲೆಯಲ್ಲಿ ಆಗಿದ್ದರೆ ಇಷ್ಟೊತ್ತಿಗೆ ಸರ್ಕಾರದ ಸಚಿವರು ಓಡೋಡಿ ಹೋಗಿ ಪರಿಹಾರ ಒದಗಿಸುತ್ತಿದ್ದರು.
ಆದರೆ ಕಲಬುರಗಿ ಜಿಲ್ಲೆಯ ಬಿಜೆಪಿ ಶಾಸಕರು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ನೆಟೆರೋಗದಿಂದ ಅನುಭವಿಸಿದ ಹಾನಿಗೆ ಪರಿಹಾರ ದೊರಕಿಸಿಕೊಡಲು ಅವರ ಬಾಯಿ ತೆಗೆಯುತ್ತಿಲ್ಲ.
ಬೊಮ್ಮಾಯಿ ಹಾಗೂ ಯಡಿಯೂರಪ್ಪ ಮುಂದೆ ಮಾತೇ ಬರಲ್ಲ ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷ ರೈತರ ಪರವಾಗಿದೆ ರೈತರಿಗೆ ಅನ್ಯಾಯವಾದರೆ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಘೋಷಿಸಿದ ಖರ್ಗೆ ಈ ಭಾಗದ ರೈತರ ಬಡವರ ಯುವಕರ ಭವಿಷ್ಯದ ಪರ ಕುಂದು ಉಂಟಾದರೆ ಉಗ್ರ ಹೋರಾಟ ನಡೆಸಿಲಿದೆ
ಇಂದು ಕಲಬುರಗಿ ಯಲ್ಲಿ ಹತ್ತಿದ ಕಿಚ್ಚು ಬೆಳಗಾವಿ ಅಧಿವೇಶನದಲ್ಲಿ ಹಾಗೂ ಬೆಂಗಳೂರಿನಲ್ಲಿ ಹತ್ತಬೇಕು.ರೈತರ ಪರ ಧ್ವನಿ ಅಧಿವೇಶನದಲ್ಲಿ ಮೊಳಗಲಿದೆ ಎಂದರು.
ಶಾಸಕ ಪ್ರಿಯಾಂಕ ಖರ್ಗೆ ಡಾ,ಶರಣಪ್ರಕಾಶ್ ಪಾಟೀಲ, ಎಂ.ವೈ ಪಾಟೀಲ, ಅಲ್ಲಮಪ್ರಭು ಪಾಟೀಲ, ಮಾತನಾಡಿ ತೊಗರಿಗೆ ಈಗ ಬಿದ್ದಿರುವ ನೆಟೆರೋಗಕ್ಕೆ ಸರ್ಕಾರವೇ ನೇರ ಕಾರಣವಾಗಿದೆ. ಸರ್ಕಾರ ಪರ್ಸೆಂಟೇಜ್ ಪಡೆಯವಲ್ಲಿ ಉತ್ಸುಕವಾಗಿದೆ.
ಕೃಷಿ ಸಚಿವ ವರ್ಗಾವಣೆಯಲ್ಲಿ ಬಿಜಿ ಆಗಿದ್ದಾರೆ. ರೈತರ ಗೋಳು ಕೇಳುವವರು ಇಲ್ಲದಾಗಿದೆ. ಈ ಕೂಡಲೇ ಜಂಟಿ ಸಮೀಕ್ಷೆ ನಡೆಸಿ ಪ್ರತಿ ಎಕರೆಗೆ ರೂ 25,000 ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಭಾಗದಿಂದ ಬಂದಿದ್ದ ರೈತರು, ಕಾಂಗ್ರೆಸ್ ಪಕ್ಷರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ಪ್ರತಿಭಟನೆ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಪ್ರಾರಂಭಗೊಂಡು ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದು ಮುಕ್ತಾಯಗೊಂಡಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ವಿಜಯ ಕುಮಾರ ರಾಮಕೃಷ್ಣ, ಶರಣುಮೋದಿ, ಸಂತೋಷ ಬಿಲಗುಂದಿ, ಈರಣ್ಣ ಝಳಕಿ ಸೇರಿದಂತೆ ಹಲವರು ಇದ್ದರು.