ಇತರೆ ರಾಷ್ಟ್ರಗಳಿಗಿಂತ ಭಾರತದಲ್ಲಿಯೇ ಹೆಚ್ಚು ಕೋವಿಡ್ ಸಾವು

ಶುಕ್ರವಾರ, 11 ಮಾರ್ಚ್ 2022 (20:27 IST)
2020ರ ಜನವರಿಯಿಂದ 2021ರ ಡಿಸೆಂಬರ್‌ವರೆಗೆ ಭಾರತದಲ್ಲಿ 40.7 ಲಕ್ಷ ಮಂದಿ ಬಲಿಯಾಗಿದ್ದಾರೆ. ವಿಶ್ವದ ಇತರೆ ದೇಶಗಳಿಗಿಂತ ಭಾರತದಲ್ಲಿ ಅತಿಹೆಚ್ಚು ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೆ ಭಾರತದಲ್ಲಿ ವರದಿಯಾಗಿದ್ದಕ್ಕಿಂತ ಸುಮಾರು 8 ಪಟ್ಟು ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದು ಲ್ಯಾನ್ಸೆಟ್ ವಿಶ್ಲೇಷಣಾ ವರದಿ ತಿಳಿಸಿದೆ.
 
ಆದರೆ ಈ ಲ್ಯಾನ್ಸೆಟ್ ವರದಿಯನ್ನು ಊಹಾತ್ಮಕ ಎಂದಿರುವ ಕೇಂದ್ರ ಆರೋಗ್ಯ ಇಲಾಖೆ, ಈ ವರದಿಯ ಅಂಕಿಅಂಶಗಳನ್ನು ತಿರಸ್ಕರಿಸಿದೆ. ಅಲ್ಲದೆ ಈ ಅಧ್ಯಯನ ವರದಿಯಲ್ಲಿ ಬೇರೆ-ಬೇರೆ ದೇಶಗಳಿಗೆ ಬೇರೆ ರೀತಿಯ ವಿಧಾನಗಳನ್ನು ಅನುಸರಿಸಲಾಗಿದೆ. ಉದಾಹರಣೆಗೆ ಭಾರತದಲ್ಲಿ ದಿನಪತ್ರಿಕೆಗಳ ವರದಿಗಳನ್ನು ಪರಿಗಣಿಸಲಾಗಿದೆ ಎಂದು ಹೇಳಿದೆ.
 
ಭಾರತದಲ್ಲಿ 4.89 ಲಕ್ಷ ಸೇರಿದಂತೆ ವಿಶ್ವದಾದ್ಯಂತ ಕೋವಿಡ್‌ಗೆ ಸುಮಾರು 60 ಲಕ್ಷ ಮಂದಿ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಲ್ಯಾನ್ಸೆಟ್ ವರದಿ ಪ್ರಕಾರ ವಿಶ್ವದಲ್ಲಿ 1.8 ಕೋಟಿ ಮಂದಿ ಸಾವಿಗೀಡಾಗಿದ್ದಾರೆ. ಅಂದರೆ ವಿಶ್ವದಲ್ಲಿ ವರದಿಯಾಗಿದ್ದಕ್ಕಿಂತಲೂ ಮೂರು ಪಟ್ಟು ಹೆಚ್ಚು ಸಾವು ಸಂಭವಿಸಿದೆ ಎಂದು ಲ್ಯಾನ್ಸೆಟ್ ಹೇಳಿದೆ.
 
ಲ್ಯಾನ್ಸೆಟ್ ವರದಿ ಪ್ರಕಾರ ಕೋವಿಡ್‌ಗೆ ಅತಿಹೆಚ್ಚು ಬಲಿಯಾದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ನಂತರದ ಸ್ಥಾನದಲ್ಲಿ ಅಮೆರಿಕ 11 ಲಕ್ಷ, ರಷ್ಯಾ 10.7 ಲಕ್ಷ, ಮೆಕ್ಸಿಕೊ 7.89 ಲಕ್ಷ, ಬ್ರೆಜಿಲ್ 7.92 ಲಕ್ಷ, ಇಂಡೊನೇಷ್ಯಾ 7.36 ಲಕ್ಷ ಹಾಗೂ ಪಾಕಿಸ್ತಾನ 6.64 ಲಕ್ಷ ಮಂದಿ ಬಲಿಯಾಗದ್ದಾರೆ. ಕಳೆದೊಂದು ವರ್ಷದಲ್ಲಿ ಜಾಗತಿಕ ಮಟ್ಟದಲ್ಲಿ ಸಂಭವಿಸಿದ ಒಟ್ಟಾರೆ ಕೋವಿಡ್ ಸಾವಿನ ಪೈಕಿ ಈ 7 ದೇಶಗಳಲ್ಲಿ ಅರ್ಧದಷ್ಟು ಸಾವುಗಳು ಸಂಭವಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ